ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣ ಮತ್ತು ಎರಡು ದಶಕಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಕೊಲೆ, ಅತ್ಯಾಚಾರ ಹಾಗೂ ಮೃತದೇಹಗಳನ್ನು ಹೂತು ಹಾಕಿರುವ ಕುರಿತಾದ ಆರೋಪಗಳು ‘ಆಧಾರರಹಿತ ಮತ್ತು ಸುಳ್ಳು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಆರೋಪಗಳ ಕುರಿತು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿರುವ ಅವರು, ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೆಗ್ಗಡೆ, ‘ಇದೀಗ ಕೇಳಿಬಂದಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಇಂತಹ ಆರೋಪಗಳಿಂದ ನನಗೆ ನೋವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯಗಳನ್ನು ಬಿಂಬಿಸಿದ ರೀತಿ ನೈತಿಕವಾಗಿ ತಪ್ಪು’ ಎಂದು ಹೇಳಿದರು.
ಗೃಹ ಸಚಿವ ಜಿ.ಪರಮೇಶ್ವರ ಅವರು ‘ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲಿದೆ’ ಎಂದು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ತನಿಖೆಗೆ ಎಸ್‌ಐಟಿ ರಚಿಸಿದ್ದನ್ನು ನಾವು ಅದೇ ದಿನ ಸ್ವಾಗತಿಸಿದ್ದೇವೆ. ಸರ್ಕಾರ ಎಸ್‌ಐಟಿ ರಚಿಸಿರುವುದು ಒಳ್ಳೆಯದು. ಏಕೆಂದರೆ ಸತ್ಯ ಹೊರಬರಬೇಕಿದೆ. ಈಗ ಕೇಳಿಬಂದಿರುವ ಆರೋಪಗಳು ಹಾಗೆಯೇ ಉಳಿಯುವುದು ಒಳ್ಳೆಯದಲ್ಲ’ ಎಂದರು.
‘ಎಸ್‌ಐಟಿ ತನಿಖೆ ಆದಷ್ಟು ಬೇಗ ಪೂರ್ಣಗೊಂಡು ವಿವಾದ ಬಗೆಹರಿಯಬೇಕೆಂದು ಬಯಸುತ್ತೇವೆ. ನಾವು ಎಲ್ಲವನ್ನೂ ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಎಸ್‌ಐಟಿ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದರು.
ಪಂಚಾಯಿತಿಗೆ ಮಾಹಿತಿ ನೀಡುತ್ತಿದ್ದೆವು
ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಸಾಕ್ಷಿ ದೂರುದಾರನ ಆರೋಪಗಳಿಗೆ ಪ್ರತಿಕ್ರಿಯಿಸಿ, ‘ಅದು ಅಸಾಧ್ಯ. ಧರ್ಮಸ್ಥಳದಲ್ಲಿ ಯಾರಾದರೂ ಸತ್ತರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಯಾವುದೇ ಸಾವು ಸಂಭವಿಸಿದಾಗ ನಾವು ಪಂಚಾಯಿತಿಗೆ ಮಾಹಿತಿ ನೀಡುತ್ತಿದ್ದೆವು. ಅವರು ಎಲ್ಲ ನಿಯಮಗಳನ್ನು ಪಾಲಿಸಿ ಶವವನ್ನು ಹೂಳುತ್ತಿದ್ದರು’ ಎಂದು ಹೇಳಿದರು.
ಕುಟುಂಬ ಸದಸ್ಯರ ಮೇಲಿನ ಆರೋಪದಲ್ಲಿ ಹುರುಳಿಲ್ಲ
ಸೌಜನ್ಯ ಸಾವಿಗೆ ನ್ಯಾಯ ಒದಗಿಸಬೇಕು ಎಂಬ ಕೂಗು ಮತ್ತೆ ಕೇಳಿಬಂದಿರುವುದರ ಬಗ್ಗೆ, ‘ಆ ರೀತಿಯ ಘಟನೆ ನಡೆದಿದೆ ಎಂಬುದು ತಿಳಿದಾಗ ನಾವು ಅದೇ ದಿನ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ನಮ್ಮ ಕುಟುಂಬದ ಮೇಲಿನ ಆರೋಪಗಳು ಆಧಾರರಹಿತ. ಅವರು ಆರೋಪ ಮಾಡಿರುವ ನಮ್ಮ ಕುಟುಂಬದ ಸದಸ್ಯರು ಶಿಕ್ಷಣಕ್ಕಾಗಿ ವಿದೇಶದಲ್ಲಿದ್ದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ಸಲ್ಲಿಸಿದ್ದೇವೆ. ಇವೆಲ್ಲ ನಮ್ಮ ಕುಟುಂಬದ ವಿರುದ್ಧ ನಡೆದಿರುವ ಷಡ್ಯಂತ್ರ’ ಎಂದರು.
ಕುಟುಂಬದ ಬಳಿ ಅಲ್ಪ ಆಸ್ತಿ
ಆಸ್ತಿಗಳ ದುರುಪಯೋಗದ ಆರೋಪಗಳನ್ನು ತಿರಸ್ಕರಿಸಿದ ಅವರು, ‘ಆಸ್ತಿಯಲ್ಲಿ ದುರುಪಯೋಗ ಎಂಬುದು ನಡೆದೇ ಇಲ್ಲ. ನಮ್ಮ ಕುಟುಂಬವು ಬಹಳ ಕಡಿಮೆ ಆಸ್ತಿಯನ್ನು ಹೊಂದಿದ್ದು, ಎಲ್ಲಾ ಆಸ್ತಿಗಳು ಸಮರ್ಪಕ ದಾಖಲೆಗಳೊಂದಿಗೆ ಟ್ರಸ್ಟ್‌ನ ಒಡೆತನದಲ್ಲಿದೆ. ಕುಟುಂಬದ ಸದಸ್ಯರು ಟ್ರಸ್ಟ್ ಅನ್ನು ಪಾರದರ್ಶಕ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದರು.
ಹಿಂದೂ ದೇವಾಲಯ... ಜೈನ ಕುಟುಂಬ
ಹಿಂದೂ ದೇವಾಲಯವನ್ನು ಜೈನ ಕುಟುಂಬವು ನಿರ್ವಹಿಸುತ್ತಿರುವ ಕುರಿತ ಪ್ರಶ್ನೆಗೆ, ‘ಈ ಆರೋಪದಲ್ಲಿ ಸತ್ಯಾಂಶವಿದೆ ಎಂದು ಭಾವಿಸುವುದಿಲ್ಲ. ಜೈನರು ನಡೆಸುತ್ತಿರುವ ಅನೇಕ ದೇವಾಲಯಗಳಿದ್ದು, ಅಲ್ಲಿ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ಪಾಲಿಸಲಾಗುತ್ತಿದೆ’ ಎಂದು ಉತ್ತರಿಸಿದರು.
''ಧರ್ಮಸ್ಥಳ ಕ್ಷೇತ್ರ ಮತ್ತು ಟ್ರಸ್ಟ್ ಅನ್ನು ಗುರಿಯಾಗಿಸಿಕೊಂಡು ವಿವಿಧ ಆರೋಪಗಳನ್ನು ಮಾಡುವ ‘ವ್ಯವಸ್ಥಿತ ಪಿತೂರಿ’ ಕಳೆದ 14 ವರ್ಷಗಳಿಂದಲೂ ನಡೆಯುತ್ತಿದೆ''
-ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಧರ್ಮಾಧಿಕಾರಿ
-----------
ಎಲ್ಲ ಪಕ್ಷಗಳ ಬೆಂಬಲ ಇದೆ
ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ ಎಂಬ ಮಾತುಗಳನ್ನು ಹೆಗ್ಗಡೆ ಅಲ್ಲಗಳೆದರು. ‘ನಾನು ಹಾಗೆ ಭಾವಿಸುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರೂ ಇಲ್ಲಿಗೆ ಬಂದಿದ್ದಾರೆ. ಕೆಲವರು ದೇವಾಲಯದ ಹೆಸರು ಕೆಡಿಸಲು ಬಯಸುತ್ತಿದ್ದಾರೆ. ಎಲ್ಲ ಪಕ್ಷಗಳೂ ದೇವಾಲಯಕ್ಕೆ ತಮ್ಮ ಬೆಂಬಲ ಸೂಚಿಸಿವೆ’ ಎಂದು ಹೇಳಿದರು. ‘ಯಾರ ಪಿತೂರಿ ಎಂಬುದು ತಿಳಿದಿದೆ’ ‘ಈ ಎಲ್ಲಾ ಪಿತೂರಿಗಳ ಹಿಂದೆ ಯಾರು ಇದ್ದಾರೆ ಎಂಬುದನ್ನು ನಮ್ಮ ಮೂಲಗಳಿಂದ ತಿಳಿದುಕೊಂಡಿದ್ದೇವೆ. ಆದರೆ ನಮ್ಮ ಬಳಿ ಪುರಾವೆಗಳಿಲ್ಲದ ಕಾರಣ ಯಾವುದೇ ಹೇಳಿಕೆ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ವಿರುದ್ಧ ಪಿತೂರಿ ನಡೆದಿರುವುದನ್ನು ಸಾಬೀತುಪಡಿಸುವುದು ಎಸ್‌ಐಟಿಯ ಜವಾಬ್ದಾರಿಯಾಗಿದೆ’ ಎಂದು ಹೆಗ್ಗಡೆ ಪ್ರತಿಪಾದಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ...
* ದೇವಾಲಯದ ಅಧಿಕಾರಿಗಳು ಅಥವಾ ಬೇರೆ ಯಾರಾದರೂ ಯಾವುದೇ ತಪ್ಪು ಮಾಡಿದ್ದರೆ ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ
* ಧರ್ಮಸ್ಥಳದ ಮೇಲೆ ಭಕ್ತರಿಗೆ ಇದ್ದ ನಂಬಿಕೆಗೆ ಯಾವುದೇ ಧಕ್ಕೆಯಾಗಿಲ್ಲ. ದೇವಸ್ಥಾನದಲ್ಲಿ ಪೂಜೆ ಧಾರ್ಮಿಕ ವಿಧಿ ವಿಧಾನಗಳಲ್ಲಿ ಬದಲಾವಣೆ ಉಂಟಾಗಿಲ್ಲ. ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ
*ತನಿಖೆಯ ಪ್ರಗತಿ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಮಧ್ಯಂತರ ವರದಿ ನೀಡಲಾಗಿದೆ ಎಂದು ಭಾವಿಸಿದ್ದು ಶೀಘ್ರದಲ್ಲೇ ಅಂತಿಮ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ
* ಆರೋಪಗಳು ಸುಳ್ಳು ಎಂಬುದು ಖಚಿತವಾಗುತ್ತಿರುವ ಕಾರಣ ಜನರು ಈಗ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯವನ್ನು ಬೆಂಬಲಿಸಲು ಮುಂದೆ ಬಂದಿದ್ದಾರೆ
* ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಸಹಿಸಲಾಗದೆ ಕೆಲವು ಶಕ್ತಿಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಆದರೆ ನಾವು ವಿಚಲಿತರಾಗಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.