ADVERTISEMENT

ಸೆಪ್ಟೆಂಬರ್ 1ಕ್ಕೆ ‘ಧರ್ಮಸ್ಥಳ ಚಲೊ’: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 15:24 IST
Last Updated 25 ಆಗಸ್ಟ್ 2025, 15:24 IST
ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ನೈಸ್‌ ರಸ್ತೆಯ ಬಳಿ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಸಕ ಸಿ.ಕೆ.ರಾಮಮೂರ್ತಿ ಮತ್ತು ಇತರರು ಇದ್ದರು.
ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ನೈಸ್‌ ರಸ್ತೆಯ ಬಳಿ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಸಕ ಸಿ.ಕೆ.ರಾಮಮೂರ್ತಿ ಮತ್ತು ಇತರರು ಇದ್ದರು.   

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಆರೋಪದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಒಪ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲು ಸೆಪ್ಟೆಂಬರ್‌ 1ರಂದು ‘ಧರ್ಮಸ್ಥಳ ಚಲೊ’ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು..

ರಾಜ್ಯ ಸರ್ಕಾರವೇ ಎನ್‌ಐಎ ತನಿಖೆಗೆ ಒಪ್ಪಿಸಿದರೆ ಸಾರ್ವಜನಿಕರು ಮತ್ತು ಭಕ್ತರಿಗೆ ಸರ್ಕಾರದ ಬಗ್ಗೆ ವಿಶ್ವಾಸ ಮೂಡಲಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಲು ಅವಕಾಶ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸರ್ಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಹೀಗಾಗಿ ಧರ್ಮಸ್ಥಳದಲ್ಲಿ ಸೆ.1 ರ ಮಧ್ಯಾಹ್ನ 2ಕ್ಕೆ ನಡೆಯುವ ಬೃಹತ್‌ ಸಮಾವೇಶದಲ್ಲಿ ಸಮಸ್ತ ಹಿಂದೂ ಸಮಾಜ ಪಾಲ್ಗೊಳ್ಳಬೇಕು ಎಂದರು.

ADVERTISEMENT

ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ಭಾಗವಹಿಸಲಿದ್ದಾರೆ. ಧರ್ಮಸ್ಥಳಕ್ಕೆ ಹೊರಡುವ ದಿನ ಹಿಂದೂ ಸಮಾಜದವರು ತಮ್ಮ ನಗರ ಮತ್ತು ಗ್ರಾಮಗಳಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಸ್ಥಳೀಯವಾಗಿ ಮೆರವಣಿಗೆ ಮಾಡಬೇಕು ಎಂದು ಹೇಳಿದರು.

‘ಧರ್ಮಸ್ಥಳದ ಘಟನೆಯಿಂದ ಸರ್ಕಾರಕ್ಕೆ ಕಳಂಕ ಬಂದಿದೆ. ಆ ಕಳಂಕದಿಂದ ಹೊರಗೆ ಬರಬೇಕಾಗಿದೆ. ಈ ದುಷ್ಕೃತ್ಯದ ಹಿಂದೆ ಇರುವ ಸಂಘಟನೆಗಳು, ದುಷ್ಟ ಶಕ್ತಿಗಳ ಬಗ್ಗೆ ಸಮರ್ಪಕ ತನಿಖೆ ಆಗಬೇಕಾಗಿದೆ. ಈ ದುಷ್ಟ ಶಕ್ತಿಗಳು ಬೇರೆ ಹಿಂದೂ ದೇವಸ್ಥಾನಗಳ ವಿರುದ್ಧವೂ ಷಡ್ಯಂತ್ರ ಮಾಡಬಹುದು. ಧರ್ಮಸ್ಥಳದ ವಿರುದ್ಧ ಮುಖ್ಯಮಂತ್ರಿ ಆತುರ ತೋರಿದ್ದೇಕೆ ಎಂಬುದು ಒಗಟಾಗಿಯೇ ಉಳಿದಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ? ಧರ್ಮಸ್ಥಳದ ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿಯ ಬಗ್ಗೆ ಎಷ್ಟು ಶ್ರದ್ಧೆ ಇದೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿಗೆ ಕೋಟ್ಯಂತರ ಭಕ್ತರಿದ್ದಾರೆ. ಈ ಭಕ್ತರಿಗೆ ಧರ್ಮಸ್ಥಳ ಒಂದು ಪವಿತ್ರಕ್ಷೇತ್ರ. ಅದು ಒಂದು ಮಂದಿರವಲ್ಲ, ಅದೊಂದು ಶ್ರದ್ಧೆ ಎನ್ನುವುದು ಮುಖ್ಯಮಂತ್ರಿಯವರಿಗೆ ತಿಳಿದಿರುವುದಾಗಿ ಭಾವಿಸಿದ್ದೇನೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರಾದ ಕೆ.ಗೋಪಾಲಯ್ಯ, ಎಸ್‌.ಆರ್‌.ವಿಶ್ವನಾಥ್‌, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ವಿಧಾನ ಪರಿಷತ್‌ನ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್ ಗೌಡ ಇದ್ದರು. 

ಎಸ್‌ಐಟಿ ರಚನೆಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ

‘ಧರ್ಮಸ್ಥಳದ ವಿಚಾರದಲ್ಲಿ ದೆಹಲಿಯ ನಾಯಕರು ಹೇಳಿದ ತಕ್ಷಣ ಎಸ್‌ಐಟಿ ರಚನೆ ಮಾಡಿದ್ದೀರಿ ಎಂಬುದು ಸತ್ಯ. ಆ ನಾಯಕ ಯಾರು’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರು. ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಕಾರ್ಯಕ್ರಮ ಆಯೋಜಿಸಿದ್ದರು. ‘ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕಿದೆ. ಯೂಟ್ಯೂಬ್‌ ವಿಡಿಯೊಗಳ ಮೂಲಕ ಅಪಪ್ರಚಾರ ನಡೆಸಿದವರ ಪರ 10 ವಕೀಲರು ಬರುತ್ತಾರೆ. ₹5 ಲಕ್ಷದಿಂದ ₹10 ಲಕ್ಷ ತೆಗೆದುಕೊಳ್ಳುವ ಈ ವಕೀಲರು ಅವರ ಪರ ನಿಲ್ಲುತ್ತಿದ್ದಾರೆ. ಮುಖ್ಯಮಂತ್ರಿಯವರೇ ಈ ವಕೀಲರ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ದೂರಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.