ADVERTISEMENT

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ವಿಚಾರಣೆ ಇನ್ನಷ್ಟು ಚುರುಕು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 0:50 IST
Last Updated 10 ಸೆಪ್ಟೆಂಬರ್ 2025, 0:50 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ಮಂಗಳೂರು:‌ ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಹಲವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಕೇರಳದ ಯೂಟ್ಯೂಬರ್‌ ಮುನಾಫ್, ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ., 'ಯುನೈಟೆಡ್ ಮಿಡಿಯಾ' ಯೂಟ್ಯೂಬ್ ಚಾನೆಲ್‌ನ ಅಭಿಷೇಕ್‌, ಸಾಕ್ಷಿ ದೂರುದಾರ ಪೊಲೀಸರಿಗೆ ಒಪ್ಪಿಸಿದ್ದ ಕಾಡಿನಲ್ಲಿ ಬುರುಡೆ ತೆಗೆದಿದ್ದ ಜಾಗ ತೋರಿಸಿದ್ದ ವಿಠಲ ಗೌಡ, ಸ್ಥಳೀಯ ನಿವಾಸಿ ಪ್ರದೀಪ್‌ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದರು. ಜಯಂತ್ ಜೊತೆ ಅವರ ಸಂಬಂಧಿಕ ಮಹಿಳೆಯೂ ಹಾಜರಾದರು.

ADVERTISEMENT

ಎಸ್‌ಐಟಿ ಕಚೇರಿ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಮುನಾಫ್‌, ‘ಎಸ್‌ಐಟಿ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿದೆ. ಬುರುಡೆ ಪ್ರಕರಣ ಮಾತ್ರ ಅಲ್ಲ; ಬೇರೆ ವಿಚಾರಗಳ ಬಗ್ಗೆಯೂ ವಿಚಾರಣೆ ನಡೆಸುತ್ತಿದೆ. ಸಾಕ್ಷಿ ದೂರುದಾರ ಕೋರ್ಟ್‌ನಲ್ಲಿ ದಾಖಲಿಸಿದ್ದ ಹೇಳಿಕೆ ಕುರಿತೂ ತನಿಖೆ ನಡೆಸುತ್ತಿದೆ’ ಎಂದರು.

‘ಸಾಕ್ಷಿ ದೂರುದಾರ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಬಳಿಕವಷ್ಟೇ ನಾನು ನನ್ನ ಯೂಟ್ಯೂಬ್ ವಾಹಿನಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ಪ್ರಸಾರ ಮಾಡಿದ್ದೆ. ಆ ದೃಶ್ಯಗಳನ್ನು ಇದೇ ಮೊಬೈಲ್‌ನಲ್ಲೇ ಚಿತ್ರೀಕರಿಸಿದ್ದೆ. ಕಾಡಿನಲ್ಲಿ ಬುರುಡೆಯನ್ನು ಹೊರತೆಗೆದಿದ್ದ ಸಂದರ್ಭದಲ್ಲಿ ನಾನು ಅಲ್ಲಿದ್ದೆನಾ, ಇಲ್ಲವೋ ಎಂಬುದನ್ನು ಎಸ್‌ಐಟಿ ಎದುರು ಹೇಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸೋಮವಾರ ರಾತ್ರಿ 11ರವರೆಗೂ ವಿಚಾರಣೆ ನಡೆಸಿದ್ದರು. ದಶಕಗಳ ಹಿಂದೆ ನಡೆದ ಕೃತ್ಯಗಳ ವಿಚಾರಣೆ ನಾಲ್ಕೇ ದಿನದಲ್ಲಿ ಮುಗಿಯಬೇಕು ಎಂದರೆ ಆಗದು. ಎಸ್‌ಐಟಿ ಮುಂದೆ ನನಗೆ ತಿಳಿದ ಸತ್ಯ ಹೇಳುತ್ತೇವೆ. ಸೌಜನ್ಯಾ ಪರ ಹೋರಾಟಗಾರರ ಜೊತೆಗೆ ಇರುವವರು ನಾವು. ನಮಗೆ ಭಯ ಇಲ್ಲ. ಸಾಕ್ಷಿ ದೂರುದಾರ ಮಾತು ಬದಲಿಸಿರಬಹುದು. ನಾವು ಕೊನೆಯವರೆಗೂ ಸೌಜನ್ಯಾ ಪರವಾಗಿ ನಿಲ್ಲುತ್ತೇವೆ’ ಎಂದರು.

‘ನಾನೂ ಕರ್ನಾಟಕದಲ್ಲೇ ಹುಟ್ಟಿ ಬೆಳೆದವ. ಬೆಳ್ತಂಗಡಿಯ ಅರಣ್ಯ ಇಲಾಖೆ ಡಿಪೊದಲ್ಲೂ ಕೆಲಸ ಮಾಡಿದ್ದೆ. ಕೇರಳದಿಂದ ಒಬ್ಬನೇ ಬಂದಿದ್ದೇನೆ. ಮಾನವ ಹಕ್ಕಿಗೆ ಸಂಬಂಧಿಸಿದ ಸರ್ಕಾರೇತರ ಸಂಘಟನೆಯಲ್ಲಿ ಸಕ್ರಿಯವಾಗಿರುವುದು ನಿಜ. ನನ್ನ ಕೆಲಸದ ಬಗ್ಗೆ ನನಗೆ ಸ್ಪಷ್ಟತೆ ಇದೆ’ ಎಂದು ತಿಳಿಸಿದರು. 

ಎಸ್ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಸೈಮನ್‌ ಮತ್ತಿತರರು ವಿಚಾರಣೆ ವೇಳೆ ಕಚೇರಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.