ADVERTISEMENT

ಧರ್ಮಸ್ಥಳ ಅಪರಾಧ ಕೃತ್ಯಗಳ ತನಿಖೆ: ನಿಯಮದಲ್ಲಿಲ್ಲ ಹಿಂದೆ ಸರಿಯುವ ಅವಕಾಶ

ಧರ್ಮಸ್ಥಳ ಅಪರಾಧ ಕೃತ್ಯಗಳ ಎಸ್‌ಐಟಿಯಿಂದ ಕೈಬಿಡುವಂತೆ ಐಪಿಎಸ್‌ ಅಧಿಕಾರಿ ಪತ್ರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 1:30 IST
Last Updated 27 ಜುಲೈ 2025, 1:30 IST
ಬಸವರಾಜ ಮಾಲಗತ್ತಿ
ಬಸವರಾಜ ಮಾಲಗತ್ತಿ   

ಬೆಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಪ್ರಕರಣದ ತನಿಖೆಗಾಗಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಇಬ್ಬರು ಅಧಿಕಾರಿಗಳು ಹಿಂದೆ ಸರಿದಿದ್ದಾರೆ. ತನಿಖೆಯ ಹೊಣೆಯಿಂದ ಹೀಗೆ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ ಎಂದು ಸೇವಾ ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ.

ಸರ್ಕಾರ ಅಥವಾ ಮೇಲಧಿಕಾರಿಗಳು ತಂಡವನ್ನು ರಚಿಸಿ ಆದೇಶ ಹೊರಡಿಸಿದ ಮೇಲೆ, ತನಿಖೆಯಿಂದ ಹೊರಗುಳಿಯುವ ಅವಕಾಶ ನೀಡುವ ಪ್ರತ್ಯೇಕ ನಿಯಮಗಳು ಅಖಿಲ ಭಾರತ ಸೇವಾ ನಿಯಮಗಳು ಮತ್ತು ರಾಜ್ಯ ಪೊಲೀಸ್‌ ಕೈಪಿಡಿಯಲ್ಲಿ ಇಲ್ಲ. ಆದರೆ, ಕರ್ತವ್ಯದ ವೇಳೆ ಪ್ರಭಾವಕ್ಕೆ ಒಳಗಾಗಬಾರದು ಎಂದು ಸೂಚಿಸುವ ನಿಯಮಗಳನ್ನು ಬಳಸಿಕೊಂಡೇ ಅಧಿಕಾರಿಗಳು ತನಿಖೆಯಿಂದ ಹಿಂದೆ ಸರಿಯುವ ಪರಿಪಾಟ ಇದೆ.

ಎಸ್ಐಟಿಯಿಂದ ಹಿಂದೆ ಸರಿಯಲು ಐಪಿಎಸ್‌ ಅಧಿಕಾರಿ ಸೌಮ್ಯಲತಾ ಹಾಗೂ ಮತ್ತೊಬ್ಬ ಐಪಿಎಸ್‌ಯೇತರ ಅಧಿಕಾರಿ ನಿರ್ಧರಿಸಿದ್ದಾರೆ. ಇಬ್ಬರು ಅಧಿಕಾರಿಗಳೂ ಮನವಿ ಪತ್ರದಲ್ಲಿ, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ. ಈ ನಡೆ ಚರ್ಚೆಯ ವಸ್ತುವಾಗಿದೆ.

ADVERTISEMENT

‘ಕರ್ತವ್ಯದ ವೇಳೆ ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗಬಾರದು ಮತ್ತು ಪ್ರಭಾವಕ್ಕೆ ಒಳಗಾಗುವಂತಹ ಸ್ಥಿತಿಯನ್ನು ತಂದುಕೊಳ್ಳಬಾರದು ಎಂದು 1968ರ ಅಖಿಲ ಭಾರತ ಸೇವಾ ನಿಯಮದ ವಿವಿಧ ಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ. ತನಿಖೆಯಿಂದ ಹಿಂದೆ ಸರಿಯಲು ಮನವಿ ಸಲ್ಲಿಸುವ ಅಧಿಕಾರಿಗಳು, ‘ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಬಹುದು ಅಥವಾ ಪ್ರಭಾವಕ್ಕೆ ಒಳಗಾಗಬಹುದು’ ಎಂದು ಉಲ್ಲೇಖಿಸುತ್ತಾರೆ. ಇದು ಪೊಲೀಸ್‌ ಇಲಾಖೆಯಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ’ ಎಂಬುದು ಕರ್ತವ್ಯನಿರತ ಐಪಿಎಸ್‌ ಅಧಿಕಾರಿಯೊಬ್ಬರ ವಿವರಣೆ.

ರಾಜ್ಯದ ‘ಹೈ–ಪ್ರೊಫೈಲ್‌’ ಪ್ರಕರಣವೊಂದರ ತನಿಖೆ ನಡೆಸುತ್ತಿರುವ ಈ ಅಧಿಕಾರಿಯು ತಮ್ಮ ಹೆಸರು ಬಹಿರಂಗಪಡಿಸಲು ಬಯಸಲಿಲ್ಲ. 

‘ಕರ್ತವ್ಯ ನಿರ್ವಹಣೆ ವೇಳೆ ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗಬಾರದು ಎಂಬುದನ್ನು ಐಪಿಎಸ್‌ ಅಧಿಕಾರಿಗಳಿಗೆ ತರಬೇತಿಯ ವೇಳೆಯಲ್ಲಿಯೇ ಅಭ್ಯಾಸ ಮಾಡಿಸಲಾಗಿರುತ್ತದೆ. ವೈಯಕ್ತಿಕ ಕಾರಣ, ಸಾಮಾಜಿಕ ಒತ್ತಡಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ತನಿಖೆ ವೇಳೆ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಕಲಿಸಲಾಗಿರುತ್ತದೆ. ನಿರ್ದಿಷ್ಟವಾಗಿ, ಪೊಲೀಸ್‌ ಇಲಾಖೆ ಇಂತಹ ಬದ್ಧತೆಯನ್ನು ಬಯಸುತ್ತದೆ’ ಎಂದರು.

‘ವೈಯಕ್ತಿಕ, ಕೌಟುಂಬಿಕ ಹಾಗೂ ಧಾರ್ಮಿಕ ಸಂಬಂಧ ಎಂಬ ಕಾರಣ ಮುಂದೊಡ್ಡಿ ತನಿಖೆಯಿಂದ ಹಿಂದೆ ಸರಿದ ಸಾಕಷ್ಟು ಉದಾಹರಣೆಗಳು ಇವೆ. ಪೊಲೀಸ್‌ ಅಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಸಂಬಂಧಿಗಳ ವಿರುದ್ಧ ದೂರು ಬಂತೆಂದು ತನಿಖೆಯಿಂದ ಹಿಂದೆ ಸರಿಯುತ್ತಾ ಹೋದರೆ, ಕೆಲಸ ಮಾಡುವುದಾದರೂ ಹೇಗೆ? ಅಂತಹವರು ಪೊಲೀಸರಾಗಿ ಮುಂದುವರೆಯಲು ಅರ್ಹರೆ ಎಂಬ ಪ್ರಶ್ನೆಯನ್ನು ಎತ್ತಬೇಕಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಶಂಕರ ಬಿದರಿ
ಸಿ.ಎಚ್‌.ಹನುಮಂತರಾಯ
ಎಸ್‌.ಟಿ.ರಮೇಶ್‌

ನೈತಿಕತೆ ಪ್ರಾಮಾಣಿಕತೆ ಪ್ರತಿಪಾದಿಸುವ ನಿಯಮ ಅಖಿಲ ಭಾರತ ಸೇವಾ ನಿಯಮಗಳು–1968 ಐಪಿಎಸ್‌ ಅಧಿಕಾರಿಗಳಿಗೂ ಅನ್ವಯವಾಗುತ್ತದೆ. ಒಬ್ಬ ಅಧಿಕಾರಿ ಕರ್ತವ್ಯದ ವೇಳೆ ಹೇಗೆ ಇರಬೇಕು ಎಂಬುದನ್ನು ಈ ನಿಯಮಗಳಲ್ಲಿ ವಿವರಿಸಲಾಗಿದೆ. ಕರ್ತವ್ಯದ ಸಂದರ್ಭದಲ್ಲಿ ಅಧಿಕಾರಿಯ ನಡೆಯು ನೈತಿಕವಾಗಿ ಉನ್ನತಮಟ್ಟದಲ್ಲಿ ಇರಬೇಕು ಮತ್ತು ಪ್ರಾಮಾಣಿಕವಾಗಿ ಇರಬೇಕು. ತಟಸ್ಥ ರಾಜಕೀಯ ನಿಲುವು ಹೊಂದಿರಬೇಕು. ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬುದನ್ನು ಈ ನಿಯಮದ 3.1(ಎ) ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಅಧಿಕಾರಿಯು ತನ್ನ ಕರ್ತವ್ಯಕ್ಕೆ ಸಂಬಂಧಿಸಿದಂತೆ ಆತನ ವೈಯಕ್ತಿಕ/ಖಾಸಗಿ ಹಿತಾಸಕ್ತಿಗಳು ಇದ್ದರೆ ಅವುಗಳನ್ನು ಬಹಿರಂಗಪಡಿಸಬೇಕು. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವಂತಿದ್ದರೆ ಅವುಗಳನ್ನು ನಿವಾರಿಸಿಕೊಳ್ಳಬೇಕು ಎಂದು ಈ ನಿಯಮದ 3.2(5) ಸೆಕ್ಷನ್‌ ಹೇಳುತ್ತದೆ.

‘ಕಾರಣಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ’ ಪತ್ರ ಬರೆದಿರುವ ಅಧಿಕಾರಿಗಳು ತನಿಖೆಯಲ್ಲಿ ಪರಿಣತಿ ಹೊಂದಿರಬಹುದು. ಈ ಕಾರಣಕ್ಕೆ ಅವರನ್ನು ನೇಮಿಸಿರುವ ಸಾಧ್ಯತೆ ಇದೆ. ಆದರೆ ಯಾರನ್ನೇ ಆಗಲಿ ಒತ್ತಾಯ ಪೂರ್ವಕವಾಗಿ ತಂಡದಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಒತ್ತಾಯ ಮಾಡಿ ತಂಡಕ್ಕೆ ಸೇರಿಸಿಕೊಂಡಾಗ ತನಿಖೆಯ ಮೇಲೆ ಪರಿಣಾಮ ಬೀರಬಹುದು. ಇಬ್ಬರು ಅಧಿಕಾರಿಗಳು ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿರಬಹುದು. ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಎಸ್‌ಪಿ ದರ್ಜೆಯ ಅಧಿಕಾರಿಗಳಿದ್ದಾರೆ. ಅವರಲ್ಲಿ ಯಾರನ್ನಾದರೂ ನೇಮಿಸಿಕೊಳ್ಳಬಹುದು. 
ಎಸ್‌.ಟಿ.ರಮೇಶ್‌ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ
‘ಮಾಹಿತಿ ನೀಡಬೇಕು’ ವೈಯಕ್ತಿಕ ಕಾರಣ ಅಥವಾ ತೊಂದರೆ ಇದ್ದರೆ ಯಾವುದೇ ತನಿಖಾ ತಂಡದಿಂದ ಅಧಿಕಾರಿಗಳಿಗೆ ಹೊರಗೆ ಉಳಿಯಲು ಅವಕಾಶವಿದೆ. ತಂಡದ ಮುಖ್ಯಸ್ಥರು ಅಥವಾ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಬೇಕು. ಅದನ್ನು ಒಪ್ಪುವುದು ಅಥವಾ ಒಪ್ಪದೇ ಇರುವುದು ಸರ್ಕಾರಕ್ಕೆ ಬಿಟ್ಟ ವಿಚಾರ.
ಶಂಕರ ಬಿದರಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ
‘ಶಿಸ್ತು ಕ್ರಮಕ್ಕೆ ಅವಕಾಶವಿದೆ’ ಕೆಲವೊಂದು ಪ್ರಕರಣಗಳಲ್ಲಿ ಅನವಶ್ಯವಾಗಿ ಗುರಿ ಆಗಬೇಕಾಗುತ್ತದೆ ಎಂದು ಭಾವಿಸಿ ಎಸ್‌ಐಟಿಯಿಂದ ಅಧಿಕಾರಿಗಳು ಹಿಂದೆ ಸರಿಯುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ತನಿಖಾ ತಂಡದಿಂದ ಹೊರಗುಳಿದರೆ ಅಂತಹ ಅಧಿಕಾರಿಯ ವಿರುದ್ಧ ಎಸ್‌ಐಟಿ ಮುಖ್ಯಸ್ಥರು ಡಿಜಿ–ಐಜಿಪಿ ಅವರಿಗೆ ಪತ್ರ ಬರೆಯಬೇಕು. ಆ ಪತ್ರ ಆಧರಿಸಿ ಗೃಹ ಇಲಾಖೆ ಕಾರ್ಯದರ್ಶಿ ಕ್ರಮ ಕೈಗೊಳ್ಳಬಹುದು. ಐಪಿಎಸ್‌ಯೇತರ ಅಧಿಕಾರಿ ಆಗಿದ್ದರೆ ಡಿಜಿ–ಐಜಿಪಿ ಅವರೇ ಶಿಸ್ತು ಕ್ರಮ ಕೈಗೊಳ್ಳಬಹುದು.
ಬಸವರಾಜ ಮಾಲಗತ್ತಿ, ನಿವೃತ್ತ ಪೊಲೀಸ್ ಅಧಿಕಾರಿ
ಬಹುಮಟ್ಟಿನ ಸಕಾರಣ ಅಗತ್ಯ ಸರ್ಕಾರಿ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯ ನಿರ್ವಹಣೆಯಿಂದ ಹಿಂದೆ ಸರಿಯಬೇಕಾದರೆ ಅದಕ್ಕೆ ಸೂಕ್ತ ಮತ್ತು ಸಮರ್ಥನೀಯ ಕಾರಣಗಳಿರಬೇಕು. ಕರ್ತವ್ಯ ಮಾಡಲೇಬೇಕೆಂಬುದು ಕಾನೂನಿಗೆ ಸಮ್ಮತವಾದ ವಿಚಾರ. ಆದರೆ ಅವರು ನಿರ್ವಹಿಸಬೇಕಾದ ಕರ್ತವ್ಯ ಅಥವಾ ನಿಗದಿತ ಜವಾಬ್ದಾರಿ ಅವರಿಗೆ ಮುಜುಗರ ಉಂಟು ಮಾಡುವಂತಿದ್ದರೆ ಅಂತಹ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಯ ಕರ್ತವ್ಯ ನಿರ್ವಹಣಾ ಜವಾಬ್ದಾರಿಯನ್ನು ಮುಂದುವರಿಸದಿರಬಹುದು. ತಮಗೆ ಈ ಜವಾಬ್ದಾರಿ ಬೇಡ ಎನ್ನುವ ಅಧಿಕಾರಿಯ ಕಾರಣಗಳನ್ನು ಇಂತಹ ಸಂದರ್ಭಗಳಲ್ಲಿ ಒಪ್ಪಬೇಕಾಗುತ್ತದೆ. ಅವರ ಕಾರಣಗಳನ್ನು ಉಪೇಕ್ಷಿಸಿ ತನಿಖೆಯಲ್ಲಿ ತೊಡಗಿಸಿದರೆ ತನಿಖೆ ಭಂಗಗೊಂಡು ಶಿಥಿಲಗೊಳ್ಳುವ ಎಲ್ಲಾ ಸಾಧ್ಯತೆಗಳಿರುತ್ತವೆ.
ಸಿ.ಎಚ್.ಹನುಮಂತರಾಯ ಹೈಕೋರ್ಟ್ ಹಿರಿಯ ವಕೀಲರು
ಸಾರ್ವಜನಿಕ ಹಿತಾಸಕ್ತಿ ಬಳಲಬಾರದು ಅಧಿಕಾರಿಗಳು ತಮಗೆ ನಿರ್ವಹಿಸಿದ ಜವಾಬ್ದಾರಿಯಿಂದ ಹಿಂದೆ ಸರಿಯುತ್ತೇವೆ ಎಂದು ಸಾಮಾನ್ಯವಾಗಿ ಕೇಳುವಂತಿಲ್ಲ ಇಲ್ಲವೇ ಮನವಿ ಮಾಡುವಂತಿಲ್ಲ. ಒಂದು ವೇಳೆ ಅಧಿಕಾರಿ ಸ್ಥಳೀಯರೇ ಆಗಿದ್ದರೆ ಆ ನಿರ್ದಿಷ್ಟ ಜವಾಬ್ದಾರಿ ಮುಜುಗರ ಉಂಟು ಮಾಡುವಂತಿದ್ದರೆ ಅಥವಾ ಕಷ್ಟದಾಯಕವಾಗಿ ಇದೆ ಎಂದಾದರೆ ಕೇಳಬಹುದು. ಸರಿಯಾದ ಕಾರಣ ಇಲ್ಲದೆ ತನಿಖೆ ಜವಾಬ್ದಾರಿ ತನಗೆ ಬೇಡ ಎಂದರೆ ಒಪ್ಪಲು ಆಗದು. ಆದಾಗ್ಯೂ ಬೇಡ ಎಂದವರನ್ನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಆದೇಶಿಸಿದರೆ ಸಾರ್ವಜನಿಕ ಹಿತಾಸಕ್ತಿ ಬಳಲುತ್ತದೆ.
ಪಿ.ಎಸ್.ರಾಜಗೋಪಾಲ್ ಪದಾಂಕಿತ ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.