ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ನಿಗದಿ ಇನ್ನೂ ಗೊಂದಲ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST
ಧಾರವಾಡದ ಕರ್ನಾಟಕ ಕಾಲೇಜು
ಧಾರವಾಡದ ಕರ್ನಾಟಕ ಕಾಲೇಜು   

ಧಾರವಾಡ: ಇಲ್ಲಿ ನಡೆಸಲು ಉದ್ದೇಶಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿ ಗೊಂದಲ ಇನ್ನೂ ಮುಂದುವರಿದಿದೆ.

ಸಾಹಿತಿಗಳೊಂದಿಗೆ ಜಿಲ್ಲಾಡಳಿತ ಬುಧವಾರ ಸಭೆ ನಡೆಸಿ ಕೃಷಿ ವಿಶ್ವವಿದ್ಯಾಲಯದ ಆವರಣವನ್ನು ಅಂತಿಮಗೊಳಿಸಿತ್ತು. ಹೀಗಿದ್ದರೂ, ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತೆ ಸ್ಥಳ ಹುಡುಕಾಟದ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಹೀಗಾಗಿ ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ ಅಥವಾ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲೋ ಎಂಬುದು ಇನ್ನೂ ಗೊಂದಲದ ಗೂಡಾಗಿದೆ.

ಸಾಹಿತ್ಯ ಸಮ್ಮೇಳನ ಆಯೋಜನೆಗೆ ಧಾರವಾಡದ ಹೆಸರು ಘೋಷಣೆಯಾದ ಕೆಲವೇ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಅಂತಿಮವಾಗಿ ಕರ್ನಾಟಕ ಕಾಲೇಜು ಮೈದಾನವೇ ಸೂಕ್ತ ಎಂದಿದ್ದರು. ಡಾ. ಚೆನ್ನವೀರ ಕಣವಿ ಸೇರಿದಂತೆ ಹಲವು ಹಿರಿಯ ಸಾಹಿತಿಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕರ್ನಾಟಕ ಕಾಲೇಜು ನೂರು ವರ್ಷ ಪೂರೈಸಿದ್ದು, ಸಮ್ಮೇಳನವನ್ನು ಅಲ್ಲಿ ಆಯೋಜಿಸುವುದು ಸೂಕ್ತ ಎಂದು ಅದೇ ಕಾಲೇಜಿನಲ್ಲಿ ಕಲಿತ ಬಹಳಷ್ಟು ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರುಅಭಿಪ್ರಾಯ ವ್ಯಕ್ತಪಡಿಸಿದ್ದರು.

ADVERTISEMENT

‘ಸಮ್ಮೇಳನಕ್ಕೆ ಬರುವ 1.5 ಲಕ್ಷಕ್ಕೂ ಅಧಿಕ ಜನರನ್ನು ನಿಭಾಯಿಸುವುದು ಕರ್ನಾಟಕ ಕಾಲೇಜು ಮೈದಾನದಲ್ಲಿ ಕಷ್ಟ. ಜತೆಗೆ ಊಟೋಪಚಾರವನ್ನು ಒಂದೇ ಕಡೆ ಮಾಡುವುದೂ ಅಸಾಧ್ಯ’ ಎಂದು ಪೊಲೀಸ್‌ ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲಾಡಳಿತ, ಕೃಷಿ ವಿಶ್ವವಿದ್ಯಾಲಯದಲ್ಲೇ ಸಮ್ಮೇಳನ ಆಯೋಜಿಸಲು ಉತ್ಸುಕವಾಗಿತ್ತು.

ನಗರದಿಂದ 4 ಕಿ.ಮೀ. ದೂರದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲವೂ ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದರು. ಜತೆಗೆ ನಗರದಿಂದ ಬಂದು ಹೋಗುವವರಿಗೆ 24 ತಾಸು ಬಸ್ಸಿನ ವ್ಯವಸ್ಥೆ ಮಾಡುವ ಕುರಿತೂ ಭರವಸೆ ನೀಡಿದ್ದರು.ಪೊಲೀಸರು ಮತ್ತು ಜಿಲ್ಲಾಡಳಿತದ ಭರವಸೆಗೆ ಸಭೆಯಲ್ಲಿ ಸೇರಿದ್ದ ಸಾಹಿತಿಗಳು ಸಮ್ಮತಿ ಸೂಚಿಸಿದ್ದರು.

ಆದರೆ, ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಕಳೆದ ವರ್ಷ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಸಾಧನಾ ಸಮಾವೇಶದ ಸಂಜೆಯ ಕಾರ್ಯಕ್ರಮಗಳು ಪ್ರೇಕ್ಷಕರಿಲ್ಲದೆ ಬಣಗುಡುತ್ತಿದ್ದುದರ ಬಗ್ಗೆ ಹಲವರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಜತೆಗೆ ಮನೆಯ ಹಬ್ಬ ಊರ ಹೊರಗೆ ಆಚರಿಸುವುದು ಬೇಡ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.

ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ತಮ್ಮ ನಿರ್ಧಾರ ಮರುಪರಿಶೀಲಿಸಲು ಮುಂದಾಗಿದ್ದಾರೆ. ಕರ್ನಾಟಕ ಕಾಲೇಜಿಗೆ ಹೊಂದಿಕೊಂಡಂತೆ ಇತರ ವಿಶಾಲ ಆವರಣಗಳ ಪಟ್ಟಿ ಮಾಡಿ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶುಕ್ರವಾರ ನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಭೇಟಿ ನೀಡುತ್ತಿದ್ದು, ಸಮ್ಮೇಳನದ ಸ್ಥಳ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.