ADVERTISEMENT

ಲಂಚ ಪಡೆದಿಲ್ಲ, ಅತ್ಯಾಚಾರ ಮಾಡಿಲ್ಲ: ಡಿ.ಕೆ. ಶಿವಕುಮಾರ್‌ ಬೇಸರ

ಇ.ಡಿ ಸೂಚನೆ ಮೇರೆಗೆ ದಾಖಲೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 19:45 IST
Last Updated 25 ಅಕ್ಟೋಬರ್ 2019, 19:45 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌    

ನವದೆಹಲಿ: ‘ನಾನು ಲಂಚ ಪಡೆದಿಲ್ಲ. ಅತ್ಯಾಚಾರ ಮಾಡಿಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಆದರೂ ಲೂಟಿ ಹೊಡೆದಿದ್ದೇನೆ ಎಂದು ಬಿಂಬಿಸಲಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೀಗ ಜನರ ಉಪಕಾರ ಸ್ಮರಣೆಯೊಂದೇ ಮುಖ್ಯ. ರಾಜಕಾರಣದ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ. ನನ್ನ ಬಂಧನವನ್ನು ವಿರೋಧಿಸಿ ಪ್ರತಿಭಟಿಸಿದವರ ಋಣ ತೀರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಬೆನ್ನು ನೋವು ಹೆಚ್ಚಿದ್ದು, ಸರಿಯಾಗಿ ಕುಳಿತುಕೊಳ್ಳಲೂ ಆಗುತ್ತಿಲ್ಲ. ಮೊದಲು ಅದಕ್ಕೆ ಚಿಕಿತ್ಸೆ ಪಡೆಯುವೆ’ ಎಂದು ಅವರು ಹೇಳಿದರು.

‘ತಿಹಾರ್‌ ಕೇಂದ್ರ ಕಾರಾಗೃಹದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತೇ’ ಎಂಬ ಪ್ರಶ್ನೆಗೆ ಉತ್ತರಿಸದ ಅವರು, ‘ಆ ಬಗ್ಗೆ ಈಗ ಏನನ್ನೂ ಹೇಳುವುದಿಲ್ಲ. ಅದೊಂದು ದೊಡ್ಡ ಕಥೆ. ಮುಂದೆ ಮಾತನಾಡುತ್ತೇನೆ’ ಎಂದರು.

‘ಅಕ್ರಮ ಗಣಿಗಾರಿಕೆ ಕುರಿತ ಯು.ವಿ. ಸಿಂಗ್‌ ವರದಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಅವರು ಕೆಲವು ಮಹತ್ವದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾತುಗಳಿವೆಯಲ್ಲ ಎಂಬ ಪ್ರಶ್ನೆಗೆ, ‘ಯಾರು ಏನು ಮಾಡುತ್ತಾರೆ ಎಂಬುದನ್ನು ಪಟ್ಟಿ ಮಾಡಿ ಇಟ್ಟುಕೊಳ್ಳಿ. ಅದಕ್ಕೂ ಮುಂದೆ ಸೂಕ್ತ ಉತ್ತರ ನೀಡುವೆ’ ಎಂದಷ್ಟೇ ಅವರು ಹೇಳಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಶಿವಕುಮಾರ್ ಅವರು ಶುಕ್ರವಾರ ಇ.ಡಿ. ಸೂಚನೆಯ ಮೇರೆಗೆ ವಕೀಲರ ಮೂಲಕ ಕೆಲವು ದಾಖಲೆಗಳನ್ನು ಸಲ್ಲಿಸಿದರು.

ಖರ್ಗೆ ಭೇಟಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ರಾತ್ರಿ ಸಂಸದ ಡಿ.ಕೆ. ಸುರೇಶ ಅವರ ನಿವಾಸಕ್ಕೆ ತೆರಳಿ, ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು. ಈ ಸಂದರ್ಭ ಉಭಯ ಮುಖಂಡರು ಗಂಟೆಗೂ ಹೆಚ್ಚು ಮಾತುಕತೆ ನಡೆಸಿದರು.

ಇ.ಡಿ. ಮೇಲ್ಮನವಿ

ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡಿರುವ ದೆಹಲಿ ಹೈಕೋರ್ಟ್‌ನ ಆದೇಶದ ಸಿಂಧುತ್ವ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಶಿವಕುಮಾರ್‌ ಪ್ರಭಾವಿ ರಾಜಕಾರಣಿಯಾಗಿದ್ದು, ಸಾಕ್ಷ್ಯಗಳನ್ನು ನಾಶಪಡಿಸುವ ಹಾಗೂ ಪ್ರಭಾವ ಬೀರುವ ಸಾಧ್ಯತೆ ಇದೆ. ಅವರಿಗೆ ಮಂಜೂರು ಮಾಡಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಇ.ಡಿ. ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.