ADVERTISEMENT

ಡೀಸೆಲ್ ದುಬಾರಿ‌: ಪ್ರಯಾಣದ ದರ ಮತ್ತೆ ಏರಿಕೆ?

ಚೇತರಿಸಿಕೊಳ್ಳಲು ಹೆಣಗುತ್ತಿರುವ ಉದ್ಯಮಕ್ಕೆ ಬರಸಿಡಿಲು

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 18:58 IST
Last Updated 25 ಜೂನ್ 2020, 18:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಡೀಸೆಲ್‌ ದರ ಪೆಟ್ರೋಲ್‌ಗಿಂತ ದುಬಾರಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಸಾರಿಗೆ ಉದ್ಯಮಕ್ಕೆ ಇದು ದೊಡ್ಡ ಹೊಡೆತವನ್ನೇ ನೀಡಿದಂತಾಗಿದೆ.

‘ಬಿಕ್ಕಟ್ಟಿನ ಸಂದರ್ಭವನ್ನು ಎದುರಿಸಲುದಿಕ್ಕೇ ತೋಚದಂತಾಗಿದೆ. ಪ್ರಯಾಣ ದರ ಏರಿಕೆಯೊಂದೇ ಸದ್ಯದ ಪರಿಹಾರ’ ಎನ್ನುತ್ತಾರೆಖಾಸಗಿ ಬಸ್‌ಗಳ ಮಾಲೀಕರು.

ಲಾಕ್‌ಡೌನ್ ಸಡಿಲಗೊಂಡರೂ ಬಸ್‌ಗಳನ್ನು ಹತ್ತಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೆಎಸ್‌ಆರ್‌ಟಿಸಿಯ 8,200 ಬಸ್‌ಗಳಲ್ಲಿ 3,500 ಬಸ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಕಾರ್ಯಾಚರಣೆಯಲ್ಲಿರುವ ಬಸ್‌ಗಳಿಗೆ ಡೀಸೆಲ್ ಖರ್ಚು ಹೊಂದಿಸಲು ಸರ್ಕಾರಿ ಸ್ವಾಮ್ಯದ ನಾಲ್ಕೂ ನಿಗಮಗಳು ಕಷ್ಟಪಡುತ್ತಿವೆ.

ADVERTISEMENT

ಖಾಸಗಿ ಬಸ್‌ಗಳ ಕಾರ್ಯಾಚರಣೆ ಕೂಡ ಶೇ 15ರಷ್ಟನ್ನು ದಾಟಲು ಸಾಧ್ಯವಾಗಿಲ್ಲ.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾಸಗಿ ರೂಟ್‌ ಬಸ್‌ಗಳು ಸಂಚರಿಸುತ್ತಿವೆ. ಉಳಿದ ಜಿಲ್ಲೆಗಳಲ್ಲಿ ಈ ಬಸ್‌ಗಳ ಸಂಚಾರ ಕಡಿಮೆ ಇದೆ. ರಾತ್ರಿ ಪ್ರಯಾಣದ ಡಿಲಕ್ಸ್ ಬಸ್‌ಗಳನ್ನು ಹತ್ತಲು ಜನ ಹೆದರುತ್ತಿದ್ದಾರೆ.

‘ಸುರಕ್ಷತಾ ಕ್ರಮಗಳನ್ನು ಕೈಗೊಂಡು 30 ಆಸನಗಳಿರುವ ಬಸ್‌ನಲ್ಲಿ 20 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲಾಗುತ್ತಿದೆ. ಆದರೂ, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿಲ್ಲ. ನಿರ್ವಹಣೆಯೇ ಹೊರೆಯಾಗಿರುವ ಸಂದರ್ಭದಲ್ಲಿ ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯೇ ಆಗುತ್ತಿದೆ. ಏನು ಮಾಡಬೇಕು ಎಂಬ ದಿಕ್ಕೇ ತೋಚದಂತಾಗಿದೆ’ ಎನ್ನುತ್ತಾರೆಕರ್ನಾಟಕ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ.

‘ಇದೇ ರೀತಿ ಮುಂದುವರಿದರೆ ಪ್ರಯಾಣಿಕರ ಬಸ್‌ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳಲಿದೆ. ಬಸ್‌ ಮಾಲೀಕರು ದಿವಾಳಿಯಾಗುವ ಸಾಧ್ಯತೆ ಇದೆ. ಪ್ರಯಾಣದರ ಏರಿಕೆಯೊಂದೇ ದಾರಿ’ ಎಂದು ಹೇಳಿದರು.

ತೆರಿಗೆ ಕಡಿತಕ್ಕೆ ಒತ್ತಾಯ

‘ಡೀಸೆಲ್ ದರ ಏರಿಕೆಯಿಂದ ಆಗಲಿರುವ ನಷ್ಟ ಸರಿದೂಗಿಸಲು ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡಬೇಕು’ ಎಂಬುದು ಲಾರಿ ಮಾಲೀಕರ ಬೇಡಿಕೆ.

‘ಒಂದೆಡೆ ಡೀಸೆಲ್ ದರ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ ರಾಜ್ಯ ಹೆದ್ದಾರಿಗಳಲ್ಲೂ ಸುಂಕ ಸಂಗ್ರಹ ಕೇಂದ್ರಗಳನ್ನು ಹೆಚ್ಚಿಸಲಾಗುತ್ತಿದೆ. ಇದರ ವಿರುದ್ಧಪ್ರತಿಭಟನೆ ಹಾದಿ ಹಿಡಿಯುವ ಆಲೋಚನೆ ನಡೆಯುತ್ತಿದೆ. ಈ ಸಂಬಂಧ ಲಾರಿ ಮಾಲೀಕರು ಮತ್ತು ಚಾಲಕರ ತುರ್ತು ಸಭೆ ಕರೆಯಲಾಗಿದೆ’ ಎಂದುಲಾರಿ ಮಾಲೀಕರು ಮತ್ತು ಚಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಖಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.