ADVERTISEMENT

Karnataka Diesel Price Hike: ಇಂದಿನಿನ ರಾಜ್ಯದಲ್ಲಿ ಡೀಸೆಲ್‌ ದರ ₹2 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 1:58 IST
Last Updated 2 ಏಪ್ರಿಲ್ 2025, 1:58 IST
<div class="paragraphs"><p>ಡೀಸೆಲ್‌ </p></div>

ಡೀಸೆಲ್‌

   

ಬೆಂಗಳೂರು: ಹಾಲಿನ ಬೆಲೆ, ವಿದ್ಯುತ್ ದರ ಮತ್ತು ಕಸ ಸಂಗ್ರಹಣೆ ಶುಲ್ಕ ಹೆಚ್ಚಳದ ಬೆನ್ನಲ್ಲೇ, ಏಪ್ರಿಲ್‌ 1ರ ರಾತ್ರಿಯಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹2ರಷ್ಟು ಏರಿಕೆಯಾಗಿದೆ.

ರಾಜ್ಯ ಸರ್ಕಾರವು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44ರಿಂದ ಶೇ 21.77ರಷ್ಟಕ್ಕೆ ಏರಿಕೆ ಮಾಡಿ, ಆದೇಶಿಸಿದೆ. ಬೆಂಗಳೂರಿನಲ್ಲಿ ₹89.02ರಷ್ಟು ಇದ್ದ ಡೀಸೆಲ್‌ ಬೆಲೆ ₹91.02ರಷ್ಟಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 3.33ರಷ್ಟು ಹೆಚ್ಚಳವಾಗಲಿದೆ. 

ADVERTISEMENT

‘2021ರ ನವೆಂಬರ್‌ 4ಕ್ಕೂ ಮುನ್ನ ರಾಜ್ಯದಲ್ಲಿ ಡೀಸೆಲ್‌ಗೆ ಶೇ 24ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿತ್ತು. ಆಗ ಪ್ರತಿ ಲೀಟರ್‌ ಡೀಸೆಲ್‌ನ ಬೆಲೆ ₹92.03ರಷ್ಟು ಇತ್ತು. 2024ರ ಜೂನ್‌ 1ರಂದು ಮಾರಾಟ ತೆರಿಗೆಯನ್ನು ಶೇ 18.44ಕ್ಕೆ ಇಳಿಸಲಾಗಿತ್ತು’ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

‘ಈಗ ತೆರಿಗೆ ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ, ನೆರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಡೀಸೆಲ್‌ ಬೆಲೆ ಕಡಿಮೆ ಇರಲಿದೆ’ ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ‘ದರ ಬೀಜಾಸುರ’ ಸರ್ಕಾರವಿದೆ. ಘಜ್ನಿ ಮಹಮದ್, ಘೋರಿ ಮಹಮದ್‌ ನಾಚುವಂತೆ ಜನರ ಮೇಲೆ ದರ ಏರಿಕೆ ದಂಡಯಾತ್ರೆ ನಡೆಸುತ್ತಿದೆ
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ
ಔಷಧ, ತರಕಾರಿ, ಬೇಳೆ ಕಾಳು ದರ ಒಂದೂವರೆ ಪಟ್ಟು ಹೆಚ್ಚಾಗಿದ್ದು, ಟೋಲ್ ದರ ಏರಿಕೆ ಜನರನ್ನು ಕಂಗಾಲು ಮಾಡಿದೆ. ಬಿಜೆಪಿಯವರು ಪ್ರತಿಭಟನೆ ನಡೆಸಬೇಕಿರುವುದು ಕೇಂದ್ರದ ವಿರುದ್ಧ
ಪ್ರಿಯಾಂಕ್ ಖರ್ಗೆ, ಪಂಚಾಯತ್ ರಾಜ್ ಸಚಿವ

ಯಾವುದರ ಮೇಲೆಲ್ಲಾ ಪ್ರಭಾವ

ಕೃಷಿ ಹಾಗೂ ಬಹುತೇಕ ಉದ್ಯಮಗಳು ಡೀಸೆಲ್ ಅನ್ನೇ ಅವಲಂಬಿಸಿದ್ದು, ದರ ಏರಿಕೆಯೂ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಎಲ್ಲ ವಲಯಗಳ ದರ ಹೆಚ್ಚಳವಾಗಲು ಇದು ಕಾರಣವಾಗಬಹುದು.

ಯಾವ ವಲಯಗಳು

  • ಸರಕು ಸಾಗಣೆ (ಟ್ರಕ್‌ಗಳು) ಮತ್ತು ಸಾರಿಗೆ (ಬಸ್‌ಗಳು, ಆಟೊಗಳು), ಡೀಸೆಲ್‌ ಕಾರುಗಳು

  • ಕೃಷಿ ಚಟುವಟಿಕೆ (ಟ್ರ್ಯಾಕ್ಟರ್‌ ಚಟುವಟಿಕೆಗಳು, ನೀರಿನ ಟ್ಯಾಂಕರ್‌ಗಳು...), ಕೃಷಿ ಉತ್ಪನ್ನಗಳ ಸಾಗಣೆ

  • ಡೀಸೆಲ್‌ ಜನರೇಟರ್‌ ಅವಲಂಬಿತ ಕೈಗಾರಿಕೆ, ಉದ್ಯಮ ಮತ್ತು ಸೇವೆಗಳು

  • ಕಟ್ಟಡ ನಿರ್ಮಾಣ ಕಾಮಗಾರಿ

  • ಅರ್ಥ್‌ಮೂವಿಂಗ್‌, ಕೊಳವೆಬಾವಿ, ರಸ್ತೆ ನಿರ್ಮಾಣ ಕಾಮಗಾರಿ

ಬಿಜೆಪಿಯಿಂದ ಅಹೋರಾತ್ರಿ ಧರಣಿ

ಬೆಂಗಳೂರು: ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯು ಬುಧವಾರ ಅಹೋರಾತ್ರಿ ಧರಣಿಯೂ ಸೇರಿ, ರಾಜ್ಯವ್ಯಾಪಿ ಸರಣಿ ಹೋರಾಟಗಳನ್ನು ಹಮ್ಮಿಕೊಂಡಿದೆ.

ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ 11ಕ್ಕೆ ಅಹೋರಾತ್ರಿ ಧರಣಿ ಆರಂಭವಾಗಲಿದೆ. ಬಿ.ಎಸ್‌.ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು  ಧರಣಿಯಲ್ಲಿ ಭಾಗವಹಿಸಲಿದ್ದಾರೆ.

ಇದೇ 5ರಂದು ಎಲ್ಲ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಮಂಡಲ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದಾರೆ. ಇದೇ 7ರಿಂದ ವಿವಿಧ ಹಂತಗಳಲ್ಲಿ ರಾಜ್ಯದಾದ್ಯಂತ ಜನಜಾಗೃತಿಗಾಗಿ ‘ಜನಾಕ್ರೋಶ ಯಾತ್ರೆ’ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.