ADVERTISEMENT

ಡಿಜಿಟಲ್‌ ಮಾರುಕಟ್ಟೆ ತರಬೇತಿ ಅಗತ್ಯ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:30 IST
Last Updated 2 ಆಗಸ್ಟ್ 2022, 21:30 IST

ಬೆಂಗಳೂರು: ಗ್ರಾಮೀಣ ಭಾಗದ ಕರಕುಶಲ ಕರ್ಮಿಗಳು ಹಾಗೂ ಸಣ್ಣ ಉದ್ದಿಮೆದಾರರಿಗೆ ಡಿಜಿಟಲ್‌ ಮಾರುಕಟ್ಟೆಯ ಬಳಕೆ ಕುರಿತು ಸಮರ್ಪಕ ತರಬೇತಿಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಉಬುಂಟು ಹಾಗೂ ಎಸ್‌ಕ್ಯಾಪ್‌ ಸಹಯೋಗದಲ್ಲಿ ಮಹಿಳಾ ಉದ್ದಿಮೆದಾರರಿಗಾಗಿ ಡಿಜಿಟಲ್‌ ಮಾರುಕಟ್ಟೆ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಡಿಜಿಟಲ್‌ ಮಾರುಕಟ್ಟೆಯು ದೈತ್ಯ ಸ್ವರೂಪದಲ್ಲಿ ಬೆಳೆಯುತ್ತಿದೆ. ಎಲ್ಲ ಉದ್ದಿಮೆದಾರರು ಮತ್ತು ವ್ಯಾಪಾರಿಗಳು ಸುಲಭವಾಗಿ ತಮ್ಮ ಉತ್ಪನ್ನ
ಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ಇದು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಕರಕುಶಲ ಕರ್ಮಿಗಳು ಮತ್ತು ಸಣ್ಣ ಉದ್ದಿಮೆದಾರರಿಗೆ ಡಿಜಿಟಲ್‌ ಮಾರುಕಟ್ಟೆಯ ಕುರಿತು ಜ್ಞಾನ ದೊರಕಿದರೆ ಅವರು ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಪ್ರಸಕ್ತ ವರ್ಷ 33,000 ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದು ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಚಟುವಟಿಕೆಗಳ ಭಾಗವಾಗಿದೆ. ಇಂತಹ ತರಬೇತಿ ಕಾರ್ಯಾಗಾರಗಳ ಮೂಲಕ ಮಹಿಳೆಯರು ಉದ್ಯಮ ರಂಗದಲ್ಲೂ ಯಶಸ್ಸು ಸಾಧಿಸಲು ನೆರವಾಗಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಬುಂಟು ಸಂಸ್ಥಾಪಕ ಅಧ್ಯಕ್ಷೆ ಕೆ. ರತ್ನಪ್ರಭಾ ಮಾತನಾಡಿ, ಇ-ಕಾಮರ್ಸ್‌ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ಪರಿಚಯಿಸಲು ಭಾರತದಾದ್ಯಂತ ಮೂರು ವರ್ಷಗಳಲ್ಲಿ 10,000 ಮಹಿಳೆಯರಿಗೆ ತರಬೇತಿ ನೀಡಲಾಗುವುದು ಎಂದರು.

ಕ್ಯಾನ್‌ ಫಿನ್‌ ಹೋಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್‌ ಕೌಸ್ಗಿ, ಕೇಂದ್ರ ಸರ್ಕಾರದ ಕೆಪಿಎಂಜಿ ಸರ್ಕಾರಿ ಮತ್ತು ಸಲಹಾ ಸೇವೆಗಳ ನಿರ್ದೇಶಕ ರೆಬ್ಬಾಪ್ರಗಡ ಪ್ರಸಾದ್‌, ಎಸ್‌ಕ್ಯಾಪ್‌ ದಕ್ಷಿಣ ಮುಖ್ಯಸ್ಥೆ ಮಿಕಿಕೊ ತನಕಾ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ಸಿಐಎ ಪ್ರಸಾದ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.