ವಾರ್ತಾ ಇಲಾಖೆ
ಚಿತ್ರ: ಗೂಗಲ್
ಬೆಂಗಳೂರು: ಅಂತರ್ಜಾಲ ಬಳಸುವ ಜನರಿಗೆ ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಡಿಜಿಟಲ್ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಇಲಾಖೆಯು ‘ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ–2024’ ಅನ್ನು ಜಾರಿಗೆ ತಂದಿದೆ.
‘ಡಿಜಿಟಲ್ ಜಾಹೀರಾತಿಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಏಜೆನ್ಸಿ ಮತ್ತು ಮಾಧ್ಯಮಗಳನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
‘ಅಂತರ್ಜಾಲ, ಕಂಪ್ಯೂಟರ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ಫೋನ್, ಸಾಮಾಜಿಕ ಜಾಲತಾಣಗಳ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಅಲ್ಲದೆ, ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತಿದೆ. ಈ ಕಾರಣಕ್ಕೆ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಮಾದರಿಯಲ್ಲಿ ಡಿಜಿಟಲ್ ಜಾಹೀರಾತು ನೀಡಲು ಮಾರ್ಗಸೂಚಿ ಸಿದ್ಧಪಡಿಸಲಾಗಿದೆ’ ಎಂದಿದ್ದಾರೆ.
‘ಈ ಮಾರ್ಗಸೂಚಿ ಅನ್ವಯ ಎಲ್ಲ ಇಲಾಖೆಗಳು, ನಿಗಮಗಳು, ಪ್ರಾಧಿಕಾರಗಳು, ಮಂಡಳಿಗಳು, ಸ್ಥಳೀಯಾಡಳಿತಗಳು, ಪುರಸಭೆಗಳು, ನಗರ ಪಾಲಿಕೆಗಳು ಈ ಮಾರ್ಗಸೂಚಿಗೆ ಅನುಸಾರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಡಿಜಿಟಲ್ ಜಾಹೀರಾತುಗಳನ್ನು ಕಡ್ಡಾಯವಾಗಿ ಬಿಡುಗಡೆ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.
ಗೂಗಲ್ (ಯೂಟ್ಯೂಬ್), ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಬಿಸಿನೆಸ್, ವಾಟ್ಸ್‌ಆ್ಯಪ್ ಚಾನಲ್), ಸರ್ಚ್ ಎಂಜಿನ್‌ಗಳಾದ ಗೂಗಲ್, ಬಿಂಗ್, ಸಾಮಾಜಿಕ ಜಾಲತಾಣಗಳಾದ ‘ಎಕ್ಸ್’, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಲಿಂಕ್‌ಡ್‌ಇನ್, ಸ್ನಾಪ್‌ಚಾಟ್, ಟೆಲಿಗ್ರಾಂ, ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್, ಸೋನಿಲಿವ್, ಜಿಯೋ ಸಿನಿಮಾ, ಜೀ 5, ವೂಟ್, ಸನ್ ನೆಕ್ಸ್ಟ್ ಮತ್ತು ಟಾಕೀಸ್, ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಪೇಟಿಎಂ, ಪೋನ್‌ಪೇ ಮತ್ತು ಜಿಪೇ ಮುಂತಾದ ಡಿಜಿಟಲ್ ವೇದಿಕೆಗಳಡಿ ಅರ್ಹ ಏಜೆನ್ಸಿಗಳ ಮೂಲಕ ಜಾಹೀರಾತು ನೀಡಲು ವಾರ್ತಾ ಇಲಾಖೆ ಉದ್ದೇಶಿಸಿದೆ.
ಡಿಜಿಟಲ್ ಮಾಧ್ಯಮ ಘಟಕಗಳು ಮತ್ತು ಡಿಜಿಟಲ್ ಜಾಹೀರಾತು ಏಜೆನ್ಸಿಗಳು sevasindhu.karnataka.gov.in ವೆಬ್‌ಸೈಟ್ ಮೂಲಕ ನಿಗದಿಪಡಿಸಿರುವ ದಾಖಲಾತಿಗಳೊಂದಿಗೆ ಶುಲ್ಕ ಪಾವತಿಸಿ, ಮೇ 15ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ವಾರ್ತಾ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.