ADVERTISEMENT

ವಿ.ವಿ.ಗಳಲ್ಲಿನ ನೇರ ನೇಮಕಾತಿ ಸ್ಥಗಿತ

ನಿಯಮ ಉಲ್ಲಂಘನೆ : ಭ್ರಷ್ಟಾಚಾರದ ವಾಸನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 19:59 IST
Last Updated 8 ನವೆಂಬರ್ 2018, 19:59 IST

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮಾವಳಿಗೆ ಅನುಗುಣವಾಗಿ ನಡೆದಿಲ್ಲ ಎಂದು ಆಕ್ಷೇಪಣೆಗಳು ಬಂದಿದ್ದರಿಂದಉನ್ನತ ಶಿಕ್ಷಣ ಇಲಾಖೆ ನೇಮಕಾತಿಗಳನ್ನು ಮುಂದಿನ ಆದೇಶದವರೆಗೆ
ತಡೆಹಿಡಿದಿದೆ.

ಯುಜಿಸಿ 2010ರಲ್ಲಿ ರೂಪಿಸಿದ ನಿಯಮಗಳ ಅನ್ವಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ನಡೆಸಲು ಇಲಾಖೆಯು 2017ರ ಜುಲೈ 17ರಂದು ಸುತ್ತೋಲೆ ಹೊರಡಿಸಿ ವಿ.ವಿ. ಗಳಿಗೆ ಸೂಚಿಸಿತ್ತು. ಆಗ ಆರಂಭಗೊಂಡಿದ್ದ ನೇಮಕಾತಿ ಪ್ರಕ್ರಿಯೆ ಇದೀಗ ಅರ್ಧಕ್ಕೆ ನಿಂತಿದೆ.

ಅಭ್ಯರ್ಥಿಗಳು, ಶಿಕ್ಷಣ ತಜ್ಞರು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಆಕ್ಷೇಪಣೆಗಳನ್ನು ಪರಿಗಣಿಸಿ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಇಲಾಖೆ ನ. 5ರ ಸುತ್ತೋಲೆಯಲ್ಲಿ ತಿಳಿಸಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ, ಮುಂದಿನ ಕ್ರಮಗಳನ್ನು ಸೂಚಿಸಲು ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ವಿ.ಬಿ.ಕುಟಿನ್ಹೊ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ.

ADVERTISEMENT

‘ಯುಜಿಸಿ ನಿಯಮಗಳ ಪ್ರಕಾರ ಎಲ್ಲ ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಅವಕಾಶವಿದೆ. ಆದರೆ, ಲಿಖಿತ ಪರೀಕ್ಷೆ ಆಧರಿಸಿ ಹುದ್ದೆಯ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿದೆ. ಇದರಿಂದ ಸಾಮಾಜಿಕ ನ್ಯಾಯ ಉಲ್ಲಂಘನೆ ಆಗುವುದಲ್ಲದೆ, ಅರ್ಹ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗುತ್ತಾರೆ’ ಎಂದು ಬೋಧಕ ಹುದ್ದೆಯ ಆಕಾಂಕ್ಷಿಯೊಬ್ಬರು ತಿಳಿಸಿದರು.

‘ಸಹ ಪ್ರಾಧ್ಯಾಪಕರ ಹುದ್ದೆಯ ನೇರ ನೇಮಕಾತಿಗೆ ಕನಿಷ್ಠ 8 ವರ್ಷಗಳ ಬೋಧನಾ ಅಥವಾ ಸಂಶೋಧನಾ ಅನುಭವ ಇರಬೇಕು ಎಂಬ ನಿಯಮವಿದೆ. ಆದರೆ, ಇಲಾಖೆ ಈ ಅವಧಿಯನ್ನು ಕನಿಷ್ಠ 5 ವರ್ಷಗಳಿಗೆ ನಿಗದಿಪಡಿಸಿದೆ’ ಎಂಬ ಆಕ್ಷೇಪಣೆ ಸಲ್ಲಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.