ADVERTISEMENT

ಸಿದ್ದರಾಮಯ್ಯ, ಡಿಕೆಶಿಯಿಂದ ಕೊಳಕು ರಾಜಕಾರಣ: ಅಂಗಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 8:00 IST
Last Updated 24 ಜುಲೈ 2020, 8:00 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬೆಳಗಾವಿ: ‘ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸುವ ಮೂಲಕ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೊಳಕು ರಾಜಕಾರಣ ಮಾಡುತ್ತಿದ್ದಾರೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕಿಡಿಕಾರಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಭ್ರಷ್ಟಾಚಾರದ ಜನಕ ಹಾಗೂ ಅಧಿಪತಿ ಯಾರಾದರೂ ಇದ್ದರೆ ಅದು ಕಾಂಗ್ರೆಸ್. ಆ ಪಕ್ಷದ ಮುಖಂಡರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ; ನೈತಿಕತೆಯೂ ಇಲ್ಲ’ ಎಂದು ಟೀಕಿಸಿದರು.

‘ಕೊರೊನಾ ಸೋಂಕಿನಿಂದಾಗಿ ಈಗ ಯುದ್ಧದಂತಹ ಪರಿಸ್ಥಿತಿ ಇದೆ. ಇದರ ವಿರುದ್ಧ ಎಲ್ಲರೂ ಸೇರಿ ಹೋರಾಡಬೇಕಿದೆ. ಎಲ್ಲ ರಾಜಕಾರಣಿಗಳೂ ಪಕ್ಷಗಳನ್ನು ಮರೆತು ಜನರ ಆರೋಗ್ಯದ ಕಡೆಗೆ ಗಮನಹರಿಸಬೇಕಾದ ಸಂದರ್ಭವಿದು. ಹೀಗಿರುವಾಗ ಕಾಂಗ್ರೆಸ್‌ನವರು ಚಿಲ್ಲರೆ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಹೀಗಾಗಿ, ಕಾಂಗ್ರೆಸ್‌ನವರಿಗೆ ಬಿಜೆಪಿ ವಿರುದ್ಧ ಟೀಕಿಸಲು ಯಾವುದೇ ಅವಕಾಶವಿಲ್ಲ. ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಹಿರಿಯರಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಶೋಭೆ ತರುವುದಿಲ್ಲ. ಈ ನಿಟ್ಟಿನಲ್ಲಿ ಅವರಿಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್ ನಾಯಕರು ಕೊಳಕು ರಾಜಕಾರಣ ಮಾಡುವುದನ್ನು ಇನ್ನಾದರೂ ಬಿಡಬೇಕು. ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಮತ್ತು ಜನರ ಸಮಸ್ಯೆಗಳ ನಿವಾರಣೆಗೆ ಅಗತ್ಯವಾದ ಕೆಲಸಗಳನ್ನು ಮಾಡಬೇಕು’ ಎಂದರು.

‘ಬಿಮ್ಸ್‌ ಆಸ್ಪತ್ರೆಯಲ್ಲಿ ನಡೆದ ಗಲಾಟೆ ಪೂರ್ವಯೋಜಿತ ಕೃತ್ಯದಂತೆ ಅನಿಸುತ್ತಿದೆ. ಇಲ್ಲವಾಗಿದ್ದರೆ ರೋಗಿ ಮೃತಪಟ್ಟ ಅರ್ಧ ಗಂಟೆಯಲ್ಲಿ ಅಷ್ಟೊಂದು ಜನರು ಹೇಗೆ ಬಂದರು? ಕಲ್ಲು ತೂರಾಟ ಮಾಡಿದ್ದಾರೆ. ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ಹಿಂದಿರುವ ಶಕ್ತಿಗಳನ್ನು ಪೊಲೀಸರು ಪತ್ತೆ ಹಚ್ಚಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದವರು ದೇಹದ್ರೋಹಿಗಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.