ADVERTISEMENT

ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ: ವರಿಷ್ಠರ ಪಾಲಿಗಿದು ಬಿಸಿತುಪ್ಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 11:48 IST
Last Updated 22 ಡಿಸೆಂಬರ್ 2018, 11:48 IST
   

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ನಿಗದಿಯಾದ ಬೆನ್ನಲ್ಲೇಕಾಂಗ್ರೆಸ್‌ನಲ್ಲಿಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ವಂಚಿತರು ಬಹಿರಂಗವಾಗಿಯೇ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕೆಲವು ಶಾಸಕರು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ. ಶುಕ್ರವಾರ ರಾತ್ರಿಯಷ್ಟೇ ಕಾಂಗ್ರೆಸ್ ಶಾಸಕರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಹಂಚಿಕೆ ಮಾಡಿತ್ತು.

ಶಾಸಕರಾದ ಎನ್. ಹ್ಯಾರಿಸ್, ಸಂಗಮೇಶ್ ನಿಗಮ ಮಂಡಳಿ ತಮಗೆ ಬೇಡವೆಂದು ಹೇಳಿದ್ದಾರೆ. ಸಂಸದೀಯ ಕಾರ್ಯದರ್ಶಿ ಸ್ಥಾನ ಬೇಡವೆಂದು ಸೌಮ್ಯಾ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಶಾಸಕರ ಈ ನಡೆ ಹೈಕಮಾಂಡ್‌ಗೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ.

ADVERTISEMENT

ನೋವಾಗಿದೆ: ಬಿ.ಸಿ.ಪಾಟೀಲ

ಹಿರೇಕೆರೂರ (ಹಾವೇರಿ ಜಿಲ್ಲೆ): ತಾಲ್ಲೂಕಿಗೆ 38 ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ, ಈ ಬಾರಿ ಸಿಗುವ ವಿಶ್ವಾಸ ಇತ್ತು. ಸಿಗದೆ ಇರುವುದಕ್ಕೆ ಬೇಸರ ಹಾಗೂ ನೋವಾಗಿದೆ ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧಿ ಗಾಳಿಯಲ್ಲಿಯೂ ಕ್ಷೇತ್ರದ ಜನ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ನನ್ನ ಜನರೇ ನನ್ನ ಹೈಕಮಾಂಡ್. ಮುಂದಿನ ದಿನಗಳಲ್ಲಿ ಜನತೆ ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಂಬಿದ್ದೆ. ಆದರೂ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಡಾ.ಅಜಯಸಿಂಗ್ ಗೆ ಸಚಿವ ಸ್ಥಾನಕ್ಕೆ ಒತ್ತಾಯ

ಕಲಬುರ್ಗಿ: ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ನೊಂದ ಅಭಿಮಾನಿಯೊಬ್ಬ ವಿಷ ಸೇವನೆಗೆ ಯತ್ನಿಸಿದ್ದಾನೆ.

ಜೇವರ್ಗಿ ತಾಲ್ಲೂಕು ನೆಲೋಗಿಯ ಶರಭು ಕಲ್ಯಾಣಿ ವಿಷ ಸೇವನೆಗೆ ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ತಡೆದರು.
ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ಖಂಡನೀಯ. ಸಂಜೆ ವರೆಗೆ ಕಾದು ನೋಡುತ್ತೇನೆ. ಸಚಿವ ಸ್ಥಾನ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶರಭು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆ ತಡೆ: ಅಜಯಸಿಂಗ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ನೆಲೋಗಿ ಗ್ರಾಮಸ್ಥರು ಜೇವರ್ಗಿ- ವಿಜಯಪುರ ಹೆದ್ದಾರಿಯ ಸೊನ್ನ ಕ್ರಾಸ್ ಬಳಿ ರಸ್ತೆ ತಡೆ ನಡೆಸಿದರು. ಅಜಯಸಿಂಗ್ ಗೆ ಸಚಿವ ಸ್ಥಾನ ನೀಡದಿದ್ದರೆ ರಸ್ತೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ರಸ್ತೆ ತಡೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸದ್ಯ 500ಕ್ಕೂ ಹೆಚ್ಚು ಜನರು ಸೊನ್ನ ಕ್ರಾಸ್ ಬಳಿ ಜಮಾಯಿಸದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.