ADVERTISEMENT

ರಾಜಕಾರಣಿಗಳಿಗೆ ₹23 ಕೋಟಿ ಪಾವತಿ?

ಐಟಿ ವಶಪಡಿಸಿಕೊಂಡ ದಾಖಲೆಗಳಲ್ಲಿನ ವಿವರ ಅಲ್ಲಗಳೆದ ಸಚಿವ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 20:17 IST
Last Updated 23 ಜೂನ್ 2018, 20:17 IST
   

ಬೆಂಗಳೂರು: ಕಾಂಗ್ರೆಸ್‌ನ ಕೆಲವು ನಾಯಕರ ಹೆಸರುಗಳನ್ನು ಹೋಲುವ ವ್ಯಕ್ತಿಗಳೂ ಸೇರಿದಂತೆ ಅನೇಕರಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ 2014– 16ರ ನಡುವೆ ₹ 23 ಕೋಟಿ ಪಾವತಿಸಿರುವ ಸಂಗತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳಿಂದ ಬಯಲಾಗಿದೆ.

ಕಳೆದ ವರ್ಷ ಶಿವಕುಮಾರ್‌ ಅವರ ಸದಾಶಿವನಗರದ ಮನೆಯ ಮೇಲೆ ದಾಳಿ ನಡೆಸಿದ ಐ.ಟಿ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. Dks/Ps/Ls/s-1 ಫೋಲ್ಡರ್‌ನ ಪುಟ ಸಂಖ್ಯೆ 72– 73ರಲ್ಲಿ ಯಾರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆದರೆ, ‘ಇದು ತಮ್ಮ ಕೈ ಬರಹ ಅಲ್ಲ’ ಎಂದು ಸಚಿವ ಶಿವಕುಮಾರ್‌ ಹೇಳಿದ್ದಾರೆ. ವಿಚಾರಣೆ ವೇಳೆ ಐ.ಟಿ ಅಧಿಕಾರಿಗಳು ಹಣ ಪಾವತಿ ಮಾಡಿರುವ ಕುರಿತು ಸಚಿವರನ್ನು ಕೇಳಿದ್ದಾರೆ. ಅದಕ್ಕೆ, ತಾವು ಯಾರಿಗೂ ಹಣ ಪಾವತಿಸಿಲ್ಲ ಎಂದು ಅವರು ಉತ್ತರಿಸಿದ್ದಾರೆ.

ADVERTISEMENT

ಫೋಲ್ಡರ್‌ನಲ್ಲಿ ಕೊಂಡಯ್ಯ, ಮುನಿಯಪ್ಪ, ಗುಲಾಂ, ದೆಹಲಿ ರಾಜೇಂದ್ರ ಎನ್ನುವ ಹೆಸರುಗಳಿವೆ. ಇವು ಕಾಂಗ್ರೆಸ್‌ ನಾಯಕರ ಹೆಸರುಗಳೇ ಅಥವಾ ಬೇರೆಯವರದ್ದೇ ಎಂದು ಸ್ಪಷ್ಟವಾಗಿಲ್ಲ. ಡಿಸೆಂಬರ್‌ 15ರಂದು ಕೊಂಡಯ್ಯ₹25 ಲಕ್ಷ, ಮುನಿಯಪ್ಪ ₹25 ಲಕ್ಷ, ಜನವರಿ 19ರಂದು ಲಿಂಗಪ್ಪ ₹20 ಲಕ್ಷ, ವಿಜಯ್‌ ಮುಳಗುಂದ್‌ ₹2 ಕೋಟಿ, ಗುಲಾಂ ₹1 ಕೋಟಿ, ರಾಜೇಂದ್ರ ₹2 ಕೋಟಿ ಎಂಬ ಪ್ರಸ್ತಾಪವಿದೆ. ಇದಲ್ಲದೆ, ಇನ್ನೂ ಅನೇಕರ ಹೆಸರುಗಳು ಪಟ್ಟಿಯಲ್ಲಿವೆ.

ಇದೇ ಫೋಲ್ಡರ್‌ನ ಒಂದನೇ ಪುಟದಲ್ಲಿ ಬೇರೆ ಬೇರೆ ಸ್ಥಳಗಳ ಮುಂದೆ ನಮೂದಿಸಿರುವ ₹ 43.18 ಕೋಟಿ ಠೇವಣಿ ಕುರಿತ ಉಲ್ಲೇಖವಿದೆ. ಇದನ್ನು ಶಿವಕುಮಾರ್‌ ಒಪ್ಪಿಕೊಂಡಿಲ್ಲ. ಈ ಬರಹವೂ ತಮ್ಮದಲ್ಲ ಎಂದು ಹೇಳಿದ್ದಾರೆ.

ಮನೆ ₹7.42 ಕೋಟಿ, ದೆಹಲಿ ಮನೆ ₹7.45 ಕೋಟಿ, ಫ್ಲ್ಯಾಟ್ಸ್‌ ಡಿಕೆಎಸ್‌ ₹10.85 ಕೋಟಿ, ಶೋಭಾ ಲೇಔಟ್‌ ₹1.78 ಕೋಟಿ, ದವನಂ₹ 9.78 ಕೋಟಿ ಎಂಬ ವಿವರಗಳಿವೆ.

ಶಿವಕುಮಾರ್‌ ಅವರ ಆಪ್ತರಾಗಿರುವ ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ರಾಜೇಂದ್ರ, ಸುನೀಲ್‌ ಕುಮಾರ್‌ ಶರ್ಮ, ಸಚಿನ್‌ ನಾರಾಯಣ್‌, ಚಂದ್ರಶೇಖರ್‌, ರಂಗನಾಥ್‌, ಸುಮಾ, ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ
ಒಳಗೊಂಡಂತೆ ಅನೇಕರ ಜತೆ ಹೊಂದಿರುವವ್ಯಾವಹಾರಿಕ ಸಂಬಂಧ ಕುರಿತು ಶಿವಕುಮಾರ್‌ ಅವರನ್ನು‍ಪ್ರಶ್ನಿಸಲಾಗಿದೆ.

ವಿವಿಧ ರಿಯಲ್‌ ಎಸ್ಟೇಟ್‌ ಹಾಗೂ ಕಟ್ಟಡ ನಿರ್ಮಾಣ ಕಂಪೆನಿಗಳ ಜೊತೆಗಿನ ಜಂಟಿ ಅಭಿವೃದ್ಧಿ ಒಪ್ಪಂದದಿಂದ ಸಚಿವ ಶಿವಕುಮಾರ್‌ ಹಾಗೂ ಅವರ ಕುಟುಂಬದ ಸದಸ್ಯರಿಗೆ 2014–15ರಿಂದ 2016–17ರವರೆಗೆ ₹206 ಕೋಟಿ ಬಂಡವಾಳ ಬಂದಿದೆ. ಐ.ಟಿ ವಶದಲ್ಲಿರುವ ದಾಖಲೆಗಳಲ್ಲಿ ಇದರ ಪ್ರಸ್ತಾಪವಿದೆ. ಈ ಬಗ್ಗೆ ಶಿವಕುಮಾರ್‌ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.