ADVERTISEMENT

ನನ್ನ ಜೈಲಿಗೆ ಕಳುಹಿಸಲು ಎಚ್‌ಡಿಕೆ ಷಡ್ಯಂತ್ರ: ಡಿಕೆಶಿ

ಮಾಧ್ಯಮಗಳೇ ವೇದಿಕೆ ಸಿದ್ಧಪಡಿಸಲಿ ಎಂದ ಉಪ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 0:17 IST
Last Updated 1 ಅಕ್ಟೋಬರ್ 2025, 0:17 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: ‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನನ್ನು ಜೈಲಿಗೆ ಹಾಕಿಸಲು ನಿರಂತರ ಷಡ್ಯಂತ್ರ ನಡೆಸುತ್ತಿದ್ದಾರೆ. ಅದನ್ನೇ ಪುನರುಚ್ಚರಿಸುತ್ತಿದ್ದಾರೆ. ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವೆ. ಮಾಧ್ಯಮಗಳೇ ವೇದಿಕೆ ಸಿದ್ಧಪಡಿಸಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಜೈಲಿಗೆ ಹಾಕಿಸುವ ಸಂಕಲ್ಪವನ್ನು ಮೊದಲೇ ಮಾಡಿದ್ದರು. ನನ್ನ ವಿರುದ್ಧ ಮಾಡಿರುವ ಆರೋಪದ ದಾಖಲೆ ಬಿಡುಗಡೆ ಮಾಡಲಿ, ಅವರ ಕುಟುಂಬದ ಬಗ್ಗೆ ನನ್ನ ಬಳಿ ಇರುವ ಭಂಡಾರದಿಂದ ದಾಖಲೆಗಳನ್ನು ತೆಗೆದು ಜನರ ಮುಂದೆ ಇಡುತ್ತೇನೆ. ಇದಕ್ಕೆ ಕೊನೆ ಹಾಡಲೇಬೇಕು’ ಎಂದರು.

ADVERTISEMENT

‘ಹಿಂದೆ ಸಾತನೂರಿನಲ್ಲಿ 20–20 ಪಂದ್ಯ ನಡೆದಂತೆ ನಡೆಯಲಿ ಎಂದು ಆಹ್ವಾನಿಸಿದ್ದೆ. ವಿಧಾನಸಭೆಯಲ್ಲಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ಅವರು ಸಂಸತ್ತಿಗೆ ಹೊರಟು ಹೋದರು. ಅವರ ಬದಲು ಬೇರೆ ನಾಯಕರ ಜತೆ ಚರ್ಚೆ ಮಾಡಲು ಆ ಪಕ್ಷದಲ್ಲಿ ನಮಗೆ ಸರಿಸಮನಾದ ನಾಯಕರಿಲ್ಲ. ಸುಮ್ಮನೇ ಹಿಟ್‌ ಆ್ಯಂಡ್‌ ರನ್‌ ರೀತಿ ನಡೆದುಕೊಳ್ಳುವುದು ತರವಲ್ಲ’ ಎಂದು ಹೇಳಿದರು.

‘ಜೈಲಿಗೆ ಹಾಕುವ ಅಧಿಕಾರ ಇರುವುದು ನ್ಯಾಯಾಧೀಶರಿಗೆ ಮಾತ್ರ. ನನ್ನ ವಿಚಾರದಲ್ಲಿ ಕುಮಾರಸ್ವಾಮಿ ನ್ಯಾಯಾಧೀಶರಂತೆ ಮಾತನಾಡುತ್ತಿದ್ದಾರೆ. ಅವರೂ ಕೂಡ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಅವರ ಕುಟುಂಬ ನಡೆಸುವ ಷಡ್ಯಂತ್ರ ಹೊಸತಲ್ಲ. ಈ ಹಿಂದೆ ನನ್ನ ತಂಗಿ, ತಮ್ಮ ಸೇರಿದಂತೆ ಎಲ್ಲರ ಮೇಲೂ ಪ್ರಯತ್ನ ಮಾಡಿದ್ದರು. ಈಗಲೂ ಅದನ್ನೇ ಮುಂದುವರಿಸುತ್ತಿದ್ದಾರೆ.  ಅವರಿಗೆ ತಕ್ಕ ಉತ್ತರ ನೀಡುತ್ತೇನೆ. ಅವರಿಗೆ ಒಳ್ಳೆಯದಾಗಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.