ADVERTISEMENT

ಮತದಾರರ ಪಟ್ಟಿ: ಬೀದಿವಾರು, ಮನೆವಾರು ಮ್ಯಾಪಿಂಗ್– ಡಿಕೆಶಿ ಆಗ್ರಹ

ದೋಷ ಸರಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 23:46 IST
Last Updated 19 ಫೆಬ್ರುವರಿ 2026, 23:46 IST
<div class="paragraphs"><p>ಮತದಾರರ ಪಟ್ಟಿ</p></div>

ಮತದಾರರ ಪಟ್ಟಿ

   

ಕೃಪೆ:ಪಿಟಿಐ

ಬೆಂಗಳೂರು: ‘ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಹಲವು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಲೋಪದೋಷಗಳು ಕಂಡುಬಂದಿದ್ದು ಅದನ್ನು ಸರಿಪಡಿಸಲು ಬೀದಿವಾರು, ಮನೆವಾರು ಮ್ಯಾಪಿಂಗ್ ಮಾಡಬೇಕು’ ಎಂದು ಆಗ್ರಹಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ.

ADVERTISEMENT

‘ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಮತದಾರರನ್ನು ಬೇರೆ ಬೇರೆ ಮತಗಟ್ಟೆಗಳು ಹಾಗೂ ಬೇರೆ ವಾರ್ಡ್‌ಗಳಿಗೆ ವಿಂಗಡಿಸಲಾಗಿದೆ. ಮತದಾರರ ವಿಳಾಸದಲ್ಲಿ ಮನೆ ಸಂಖ್ಯೆ, ರಸ್ತೆ ಸಂಖ್ಯೆ ತಪ್ಪಾಗಿ ನಮೂದಿಸಲಾಗಿದೆ. ಕೆಲವು ಮತದಾರರ ಹೆಸರು ಎರಡು ಹಾಗೂ ಹೆಚ್ಚು ಬಾರಿ ಸೇರ್ಪಡೆಯಾಗಿದ್ದರೆ, ಇನ್ನೂ ಕೆಲವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕೆಲವು ಬೀದಿಗಳಲ್ಲಿರುವ ಮತದಾರರ ಹೆಸರು ಪಟ್ಟಿಯಲ್ಲಿ ಕಣ್ಮರೆಯಾಗಿದೆ. ಕೆಲವು ಮತದಾರರ ವಿಳಾಸ ಸರಿಯಾಗಿದ್ದರೂ ಅವರನ್ನು ಬೇರೆ ವಾರ್ಡ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ.

‘ಈ ತಪ್ಪುಗಳು ಕಣ್ತಪ್ಪಿನಿಂದ ಆಗಿರುವಂತೆ ಕಾಣುವುದಿಲ್ಲ. ರಾಜಕೀಯ ಪಕ್ಷಗಳಲ್ಲಿ ಗೊಂದಲ ಮೂಡಿಸಲು ಉದ್ದೇಶಪೂರ್ವಕವಾಗಿ, ವ್ಯವಸ್ಥಿತವಾಗಿ ನಡೆಸಿರುವಂತಿದೆ. ಇದರಿಂದ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಗೆ ಧಕ್ಕೆ ಆಗಿದೆ. ಈ ಪ್ರಮಾದಗಳನ್ನು ಪಾರದರ್ಶಕವಾಗಿ ಹಾಗೂ ಶಾಶ್ವತವಾಗಿ ಸರಿಪಡಿಸಲು ಮ್ಯಾಪಿಂಗ್ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿರುವ ಎಲ್ಲ ಬೀದಿಗಳು, ಪ್ರತಿ ಬೀದಿಗಳಲ್ಲಿರುವ ಎಲ್ಲ ಮನೆಗಳು, ಪ್ರತಿ ಮನೆಯಲ್ಲಿರುವ ಎಲ್ಲ ಮತದಾರರನ್ನು ಮ್ಯಾಪಿಂಗ್ ಮಾಡಬೇಕು. ಇದರಿಂದ ಮತದಾರರ ಪಟ್ಟಿಯಲ್ಲಿ ನಿಖರತೆ ಕಾಪಾಡಿ, ನಕಲಿ ಮತದಾರರನ್ನು ತೆಗೆಯಲು ಹಾಗೂ ಕೈಬಿಟ್ಟಿರುವ ಮತದಾರರನ್ನು ಮತ್ತೆ ಸೇರಿಸಲು ಸಾಧ್ಯವಾಗಲಿದೆ. ಅರ್ಹ ಮತದಾರರು ಮತದಾನದ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ವಿಶೇಷ ಪರಿಷ್ಕರಣೆ ಅಭಿಯಾನ ನಡೆಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.