
ಹೈಕೋರ್ಟ್
ಬೆಂಗಳೂರು: ‘ಮನೆಯಲ್ಲಿದ್ದ ಮಗಳನ್ನು ಅಳಿಯ ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದಾನೆ’ ಎಂದು ಆರೋಪಿಸಿ ಅಳಿಯ ಮತ್ತು ಆತನ ಸ್ನೇಹಿತನ ವಿರುದ್ಧ ಅತ್ತೆ ದಾಖಲಿಸಿದ್ದ ಪ್ರಕರಣವೊಂದರಲ್ಲಿ ಅವರಿಬ್ಬರನ್ನೂ ಜೈಲಿಗೆ ಕಳುಹಿಸಿದ್ದ ವಿಚಾರಣಾ ನ್ಯಾಯಾಲಯದ ನಡೆಗೆ ಹೈಕೋರ್ಟ್ ಕಿಡಿ ಕಾರಿದೆ.
‘ಕಾನೂನು ದುರ್ಬಳಕೆಗೆ ಇದೊಂದು ಜ್ವಲಂತ ಉದಾಹರಣೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ನ್ಯಾಯಾಂಗ ಬಂಧನದಲ್ಲಿರುವ ಅಳಿಯ ಮತ್ತು ಆತನ ಗೆಳಯನನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
‘ನನ್ನ ಮಗಳನ್ನು ಅಳಿಯ (ಮಗಳ ಗಂಡ) ಮತ್ತು ಅವರ ಸ್ನೇಹಿತ ಅಪಹರಣ ಮಾಡಿದ್ದಾರೆ’ ಎಂದು ಆರೋಪಿಸಿ ರಾಜಾಜಿನಗರದ ನಿವಾಸಿಯಾದ ಅತ್ತೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನುಸಾರ ಅಳಿಯ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿ ನಗರದ 32ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇದೇ 16ರಂದು ಆದೇಶಿಸಿದ್ದರು.
ಇದನ್ನು ಪ್ರಶ್ನಿಸಿ ಬಂಧನದಲ್ಲಿರುವ ಇಬ್ಬರೂ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ವಯಸ್ಕ ಮಗಳು ಸ್ವ ಇಚ್ಛೆಯಿಂದ ಮನೆಬಿಟ್ಟು ಗಂಡನ ಜೊತೆಗೆ ಹೋಗಿದ್ದಾರೆ. ಇದನ್ನು ಅಪಹರಣ ಪ್ರಕರಣ ಎಂದು ದಾಖಲಿಸಿರುವುದು ಸರಿಯಲ್ಲ. ಆದಾಗ್ಯೂ, ಇದು ಜಾಮೀನು ಪಡೆಯಬಹುದಾದ ಪ್ರಕರಣ’ಎಂದು ಹೇಳಿದೆ.
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ನ್ಯಾಯಪೀಠ, ‘ಅರ್ಜಿದಾರರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಜೈಲಾಧಿಕಾರಿಗೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.