ADVERTISEMENT

ಎತ್ತಿನಹೊಳೆ: ಕೇಂದ್ರದ ಆಕ್ಷೇಪಣೆಗೆ ರಾಜ್ಯದ ಉತ್ತರ ಹೋಗಿದೆ– ಡಿಕೆಶಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 1:07 IST
Last Updated 9 ಜುಲೈ 2025, 1:07 IST
ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರಿಗೆ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು. ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇದ್ದಾರೆ. 
ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರಿಗೆ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು. ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇದ್ದಾರೆ.     

ನವದೆಹಲಿ: ‘ಎತ್ತಿನಹೊಳೆ ಯೋಜನೆ ವಿಚಾರವಾಗಿ ಎದುರಾಗಿರುವ ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಸ್ಪಷ್ಟನೆ ನೀಡಿದ್ದು, ಆಕ್ಷೇಪಗಳನ್ನು ನಿವಾರಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದರ್ ಯಾದವ್‌ ಅವರನ್ನು ಮಂಗಳವಾರ ಇಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು. 

‘ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚೆ ಮಾಡಲಾಗಿದ್ದು, ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಕೊಟ್ಟಿರುವ ವಿಚಾರವನ್ನು ಅವರಿಗೆ ವಿವರಿಸಿದ್ದೇವೆ. ಈ ಯೋಜನೆಯ ಸುಮಾರು ಶೇ 60ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಈ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಮಾಡಿರುವ ಆಕ್ಷೇಪಣೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ’ ಎಂದರು. 

ADVERTISEMENT

ಎತ್ತಿನಹೊಳೆ ಯೋಜನೆಯಲ್ಲಿ 423 ಎಕರೆ ಅರಣ್ಯ ಪ್ರದೇಶ ಬಳಕೆಗೆ ಕೇಂದ್ರ ಅರಣ್ಯ ಇಲಾಖೆ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾವು ಈಗಾಗಲೇ ಪರ್ಯಾಯ ಭೂಮಿ ನೀಡಿದ್ದೇವೆ. ಇಲ್ಲಿ ಕೆಲವು ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು, ಮತ್ತೆ ಕೆಲವು ಕಂದಾಯ ಇಲಾಖೆಯ ಭೂಮಿಯಾಗಿದೆ. ಈ ಜಾಗವನ್ನು 40-50 ವರ್ಷಗಳ ಹಿಂದೆ ರೈತರು ಬಳಸುತ್ತಿದ್ದು, ನಾವು ಅವರಿಗೆ ಪರಿಹಾರ ನೀಡಿ ವಶಕ್ಕೆ ಪಡೆದಿದ್ದೇವೆ. ಇದಾದ ನಂತರ ಈ ತಮಗೆ ಸೇರಿದ್ದು ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಾವು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಈ ಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸ ಆಗಿದೆ. ಅಲ್ಲಿ ಕಾಲುವೆಗೆ ಅಗೆದಿರುವ ಮಣ್ಣನ್ನು ಪಕ್ಕದಲ್ಲಿ ಹಾಕಿರುವುದಕ್ಕೆ ತಕರಾರು ಎತ್ತಿದ್ದಾರೆ. ಈಗ ಅದನ್ನು ತೆರವುಗೊಳಿಸಲು ನಾವು ಒಪ್ಪಿದ್ದೇವೆ. ಅದನ್ನು ಬೇಕಿದ್ದರೆ 25 ಕಿ.ಮೀ. ದೂರದಲ್ಲಿ ಹಾಕಲು ಸಿದ್ಧರಿದ್ದೇವೆ. ನಮಗೆ ಕೆಲಸ ಆಗಬೇಕು. ಈ ಯೋಜನೆಗೆ ₹24 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದೇವೆ. ಈ ಎಲ್ಲ ವಿಚಾರ ತಿಳಿಸಿದ್ದೇವೆ’ ಎಂದರು. 

‘ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ಯೋಜನೆ ಬಗ್ಗೆ ಚರ್ಚೆ ಮಾಡಲಾಗಿದೆ. ಗೋವಾ ಸರ್ಕಾರವು ನಮ್ಮ ರಾಜ್ಯದ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕಾನೂನು ತಂಡದ ಜೊತೆ ಚರ್ಚೆ ಮಾಡಲಾಗಿದೆ. ಅವರು ತಮ್ಮ ರಾಜ್ಯದ ವನ್ಯಜೀವಿ ಪ್ರದೇಶ ಸಂರಕ್ಷಣೆ ಮಾಡಲಿ. ನಮ್ಮ ರಾಜ್ಯದ ಬಗ್ಗೆ ಚರ್ಚೆ ಮಾಡುವ ಅಧಿಕಾರ ಅವರಿಗಿರುವುದಿಲ್ಲ. ಮಹದಾಯಿ ನ್ಯಾಯಮಂಡಳಿ ತೀರ್ಪು ಬಂದ ನಂತರ ನಾವು ಟೆಂಡರ್ ಕರೆದಿದ್ದೇವೆ. ಕೇಂದ್ರ ಸರ್ಕಾರ ದಿಟ್ಟ ತೀರ್ಮಾನ ಮಾಡಬೇಕಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ’ ಎಂದರು. 

ಸಂಸದರ ಜತೆಗೆ ಸಭೆ: ‘ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯದ ಸಂಸದರ ಜತೆಗೆ ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಸಭೆ ನಡೆಸಲಾಗುವುದು. ಅವರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಅವರು ಮನವಿ ಮಾಡಿದರು. 

ಭದ್ರಾ ಮೇಲ್ದಂಡೆ: ಪರಿಷ್ಕೃತ ಯೋಜನಾ ವೆಚ್ಚ ಸಲ್ಲಿಕೆ

ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ ಹಾಗೂ ಪರಿಷ್ಕೃತ ಅಂದಾಜು ವೆಚ್ಚವನ್ನು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದೆ.  ‘ಮಾಸ್ಟರ್‌ ಪ್ಲಾನ್‌ ಅನ್ನು ಮಾರ್ಚ್‌ನಲ್ಲಿ ಹಾಗೂ ಅಂದಾಜು ವೆಚ್ಚವನ್ನು ಜೂನ್‌ನಲ್ಲಿ ಸಲ್ಲಿಸಲಾಗಿದೆ. ಈ ಯೋಜನೆ ಬಗ್ಗೆ ಹಣಕಾಸು ಇಲಾಖೆಯ ನಾಲ್ಕು ಸಮಿತಿಗಳು ಈಗಾಗಲೇ ಅನುಮೋದನೆ ಕೊಟ್ಟಿವೆ. ಮತ್ತೊಮ್ಮೆ ಸಮಿತಿಯ ಅನುಮೋದನೆ ಪಡೆಯಬಾರದು. ಹೀಗಾದರೆ ಅನುದಾನ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ’ ಎಂದು ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರ ಗಮನಕ್ಕೆ ತಂದರು.  ‘ಈ ಯೋಜನೆಯು ಮಧ್ಯ ಕರ್ನಾಟಕ ಭಾಗದ ಅತಿ ದೊಡ್ಡ ಏತ ನೀರಾವರಿ ಯೋಜನೆ. ಈ ಯೋಜನೆ ಮೂಲಕ 29.90 ಟಿಎಂಸಿ ನೀರನ್ನು ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ಹಾಗೂ ದಾವಣಗೆರೆಯ 225515 ಹೆಕ್ಟೇರ್ ಕೃಷಿ ಭೂಮಿಗೆ ಒದಗಿಸಲಾಗುವುದು. ಜೊತೆಗೆ ಬರಪೀಡಿತ ತಾಲ್ಲೂಕುಗಳ 367 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮರುಪೂರಣ ಮಾಡಲಾಗುತ್ತದೆ.  ಈ ಯೋಜನೆ ಜಾರಿಗೆ ಪರಿಷ್ಕತ ಅಂದಾಜು ಮೊತ್ತ ₹21473 ಕೋಟಿ ಆಗಿದೆ. ಈ ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿಯು ಒಪ್ಪಿಗೆ ನೀಡಿದೆ. ಈ ಯೋಜನೆಗೆ ಪಿಎಂಕೆಎಸ್ ವೈ-ಎಐಬಿಪಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.