ADVERTISEMENT

ನಾನು, ಸಿ.ಎಂ ಮಾತನಾಡಿದ್ದಕ್ಕಷ್ಟೇ ಕಿಮ್ಮತ್ತು: ಕುತೂಹಲ ಮೂಡಿಸಿದ ಡಿಕೆಶಿ ಮಾತು

‘ಮಾತುಕತೆ’– ಕುತೂಹಲ ಮೂಡಿಸಿದ ಡಿಕೆಶಿ ಮಾತಿನ ಒಳಮರ್ಮ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 23:30 IST
Last Updated 1 ನವೆಂಬರ್ 2025, 23:30 IST
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ನಾನು ಮತ್ತು ಮುಖ್ಯಮಂತ್ರಿ ಏನು ಮಾತನಾಡಿದ್ದೇವೆಯೊ ಅದು ಮಾತ್ರ ಮಾತು. ಮಿಕ್ಕ ಯಾರ ಮಾತಿಗೂ ಕಿಮ್ಮತ್ತು ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉ‍ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಚರ್ಚೆ ಬಿರುಸಾಗಿ ನಡೆಯುತ್ತಿರುವ ಹೊತ್ತಿನೊಳಗೆ ಶಿವಕುಮಾರ್‌ ಅವರ ಮಾತು, ನಾನಾ ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ತಮ್ಮ ಮಧ್ಯೆ ಏನು ಮಾತುಕತೆ ನಡೆದಿದೆ ಎನ್ನುವುದನ್ನು ಬಹಿರಂಗಪಡಿಸದ ಶಿವಕುಮಾರ್, ಸರ್ಕಾರ ರಚನೆಯ ವೇಳೆ ನಡೆದಿದೆ ಎನ್ನಲಾಗುತ್ತಿರುವ ‘ಅಧಿಕಾರ ಹಂಚಿಕೆ’ಯ ಕುರಿತ ವಾದಕ್ಕೆ ಪುಷ್ಟಿ ನೀಡಿದ್ದಾರೆ ಎಂಬ ವಿಶ್ಲೇಷಣೆಯೂ ಶುರುವಾಗಿದೆ.

ADVERTISEMENT

ಇದೇ ತಿಂಗಳ ಅಂತ್ಯಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದೆ. ರಾಜಕೀಯ ವಲಯದಲ್ಲಿ ನಡೆಯುತ್ತಿರುವ ‘ನವೆಂಬರ್ ಕ್ರಾಂತಿ’ ಬಗ್ಗೆ ಏನು ಹೇಳುತ್ತೀರಿ ಎಂದು ಸುದ್ದಿಗಾರರು ಶನಿವಾರ ಪ್ರಶ್ನಿಸಿದಾಗ, ‘ನಾವು ಏನು ಮಾತನಾಡಿಕೊಂಡಿದ್ದೇವೆಯೊ ಅದರ ಪ್ರಕಾರ ನಡೆದುಕೊಳ್ಳುತ್ತಾ ಇದ್ದೇವೆ. ಯಾರೊ ಒಬ್ಬರ, ಇಬ್ಬರ ಹೇಳಿಕೆಗಳಿಗೆ ಕಿಮ್ಮತ್ತು ಕೊಡುವುದು ಬೇಡ’ ಎಂದು ಶಿವಕುಮಾರ್ ಹೇಳಿದರು.

‘ನೀವು ಒಮ್ಮತದಲ್ಲಿ ಇದ್ದೀರಾ’ ಎಂದು ಕೇಳಿದಾಗ, ‘ಒಮ್ಮತದಲ್ಲಿ ಇರುವ ಕಾರಣಕ್ಕೇ 136 ಕ್ಷೇತ್ರ ಗೆದ್ದು 140ಕ್ಕೆ ನಮ್ಮ ಬಲ‌ ಹೆಚ್ಚಿರುವುದು’ ಎಂದರು.

ತ್ಯಾಗಕ್ಕೆ ಸಿದ್ಧ: ಕಾರವಾರದಲ್ಲಿ ಶನಿವಾರ ಮಾತನಾಡಿದ ಸಚಿವ ಮಂಕಾಳ ವೈದ್ಯ ‘ನಮ್ಮ ಕುಟುಂಬ (ಸರ್ಕಾರ) ಗಟ್ಟಿಯಿದೆ. ಕುಟುಂಬದ ಯಜಮಾನರೂ (ಮುಖ್ಯಮಂತ್ರಿ) ಗಟ್ಟಿಯಾಗಿದ್ದಾರೆ. ಹೀಗಾಗಿ, ನಾವೆಲ್ಲ ಸಚಿವ ಸ್ಥಾನ ಪಡೆದು ಆಡಳಿತ ನಡೆಸಿದ್ದೇವೆ. ಕುಟುಂಬದ ಒಳಿತಿಗೆ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದರು.

‘ನಾಯಕತ್ವ ಬದಲಾವಣೆ ಪ್ರಶ್ನೆ ಸದ್ಯ ನಮ್ಮೆದುರು ಇಲ್ಲ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ತಲೆಬಾಗುತ್ತೇವೆ’ ಎಂದರು.

‘ಡಿಕೆಶಿ ನಿಮಗೆ ಹೇಳಿದ್ದಾರೆಯೇ?’

‘ಮುಖ್ಯಮಂತ್ರಿಯಾಗಿ ನ.21ರಂದು ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಏನಾದರೂ ನಿಮಗೆ ಹೇಳಿದ್ದಾರೆಯೇ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕೋಪದಿಂದಲೇ ಸುದ್ದಿಗಾರರನ್ನು ಪ್ರಶ್ನಿಸಿದರು.

ಕೋಲಾರದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಸುದ್ದಿ ಮಾಧ್ಯಮಗಳು ಸೃಷ್ಟಿಸಿದ್ದೇ ಹೊರತು ನಾವಲ್ಲ’ ಎಂದರು.

‘ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂದು ಯಾರು, ಯಾವಾಗ ಹೇಳಿದ್ದಾರೆ? ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್ ಏನಾದರೂ ಹೇಳಿದ್ದಾರೆಯೇ? ಯಾರಾದರೂ ದಿನಾಂಕ ನಿಗದಿ
ಪಡಿಸಿದ್ದಾರೆಯೇ? ಈ ಸಂಬಂಧ ಏನಾದರೂ ದಾಖಲೆ ಇದೆಯೇ?’ ಎಂದು ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹರಿಹಾಯ್ದರು.‌ ‘ನಾವೆಲ್ಲ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹೈಕಮಾಂಡ್ ಹೇಳಿದಂತೆ ಕೇಳುವವರು. ಹೀಗಾಗಿ, ಮತ್ತೊಬ್ಬರ ಮಾತಿಗೆ ಕಿವಿಗೊಡುವುದಿಲ್ಲ’ ಎಂದರು.

‘ಡಿಕೆಶಿಗೆ ಅರ್ಹತೆ ಇದೆ’

‘ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಎರಡು ಕಣ್ಣುಗಳು. ಇಬ್ಬರೂ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ’ ಎಂದರು.

‘ರಾಜಕಾರಣದಲ್ಲಿ ಮುಖ್ಯಮಂತ್ರಿ, ಪ್ರಧಾನಿ ಆಗುವ ಅವಕಾಶ ಬಂದರೆ ಯಾರೂ ಬೇಡ ಎನ್ನುವುದಿಲ್ಲ. ಸಚಿವರಾಗುವ ಹಕ್ಕು, ಸಾಮರ್ಥ್ಯ ಎಲ್ಲರಿಗೂ ಇದೆ’ ಎಂದರು.

ನವೆಂಬರ್ ಕ್ರಾಂತಿ– ಉತ್ತರಿಸುವುದಿಲ್ಲ: ಯತೀಂದ್ರ

‘ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಉತ್ತರಿಸುವುದಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ’ ಎಂದು ಸಿದ್ದರಾಮಯ್ಯ ಅವರ ಮಗ, ವಿಧಾನಪರಿಷತ್‌ ಸದಸ್ಯ ಡಾ. ಯತೀಂದ್ರ ಹೇಳಿದರು.

ಮೈಸೂರಿನಲ್ಲಿ ಶನಿವಾರ ಮಾತನಾಡಿದ ಅವರು, ‘ಸಚಿವ ಸಂಪುಟ ಪುನರ್‌ರಚನೆ ವಿಚಾರವಾಗಿ ತಂದೆಯವರು ಈಗಾಗಲೇ ಹೇಳಿದ್ದಾರೆ. ಅವರು ಮುಖ್ಯಮಂತ್ರಿ ಆಗಿರುವವರೆಗೂ ನಾನು ಸಚಿವ ಸ್ಥಾನ ಕೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೆಲವರು ಚರ್ಚೆ ಮಾಡಿದ ಕೂಡಲೇ ಸರ್ಕಾರ ಬದಲಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚಿಸದಂತೆ ಎಲ್ಲರಿಗೂ ಹೈಕಮಾಂಡ್ ಸೂಚನೆ ನೀಡಿದೆ. ನಾನಂತೂ ಈವರೆಗೂ ಎಲ್ಲೂ ಚರ್ಚೆ ಮಾಡಿಲ್ಲ.
-ಕೆ.ಜೆ. ಜಾರ್ಜ್, ಇಂಧನ ಸಚಿವ 
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಂದುವರಿಯಲಿದ್ದಾರೆ. ಹೀಗಾಗಿ ದಲಿತ ಮುಖ್ಯಮಂತ್ರಿ ಚರ್ಚೆ ಸದ್ಯಕ್ಕೆ ಅಗತ್ಯವಿಲ್ಲ. ಈ ಚರ್ಚೆಗೆ ಕಾರಣವೂ ಇಲ್ಲ, ಅವಕಾಶವೂ ಇಲ್ಲ ಹಾಗೂ ಪೂರಕ ಸನ್ನಿವೇಶವೂ ಇಲ್ಲ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.