
ಬೆಂಗಳೂರು: ‘ನಾನು ಶುಕ್ರವಾರ (ಜ. 16) ದೆಹಲಿಗೆ ಹೋಗುತ್ತಿದ್ದು, ಪಕ್ಷದ ಎಲ್ಲ ನಾಯಕರನ್ನು ಅಲ್ಲಿ ಭೇಟಿ ಮಾಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
‘ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಗುರುವಾರ ಹೀಗೆ ಪ್ರತಿಕ್ರಿಯಿಸಿದರು.
‘ರಾಹುಲ್ ಗಾಂಧಿಯನ್ನು ನಾನು ಭೇಟಿ ಮಾಡುವುದು ಹೊಸತೇನೂ ಅಲ್ಲ. ನಮ್ಮ ಪಕ್ಷದ ಅಧ್ಯಕ್ಷರು, ನಾಯಕರನ್ನು ಭೇಟಿ ಮಾಡುವುದು, ಕರೆ ಮಾಡಿ ಅವರ ಜೊತೆ ಚರ್ಚಿಸುವುದು ಸಹಜ ಪ್ರಕ್ರಿಯೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ’ ಎಂದರು.
‘ರಾಹುಲ್ ಗಾಂಧಿ ಅವರನ್ನು ನೀವು ಭೇಟಿ ನಂತರ ನಿಮ್ಮ ಬೆಂಬಲಿಗ ಶಾಸಕರು ಸಂತೋಷವಾಗಿದ್ದಾರೆ. ಅವರ ಅಪೇಕ್ಷೆಯನ್ನು ರಾಹುಲ್ ಬಳಿ ಹೇಳಿಕೊಳ್ಳುತ್ತೀರಾ’ ಎಂದು ಕೇಳಿದಾಗ, ‘ಅವರು ನಮ್ಮ ಪಕ್ಷದ ನಾಯಕರು. ನಿಮ್ಮ (ಮಾಧ್ಯಮಗಳ) ಬಯಕೆಯನ್ನು ಅವರ ಮುಂದೆ ಪ್ರಸ್ತಾಪಿಸುತ್ತೇನೆ’ ಎಂದರು.
‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ’ ಎಂದು ನಾನು ಬುಧವಾರ ಮಾಡಿದ್ದ ‘ಎಕ್ಸ್’ನ್ನು ಕೆಲವು ಮಾಧ್ಯಮಗಳು ವಿವಿಧ ರೀತಿ ವ್ಯಾಖ್ಯಾನಿಸಿವೆ. ಕಾವೇರಿ ಆರತಿಯ ಪ್ರಾರ್ಥನೆಗೆ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ. ಮೇಕೆದಾಟು ಯೋಜನೆಯ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದೇನೆ. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವುದರಲ್ಲಿ ಅರ್ಥವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.