ADVERTISEMENT

ಮುಖ್ಯಮಂತ್ರಿ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಡಿ.ಕೆ. ಶಿವಕುಮಾರ್

'ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ'

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:39 IST
Last Updated 11 ಅಕ್ಟೋಬರ್ 2025, 6:39 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: 'ಮುಖ್ಯಮಂತ್ರಿ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ. ಕೆಲವು ಮಾಧ್ಯಮಗಳು ಸುದ್ದಿ ತಿರುಚಿ ವಿವಾದ ಸೃಷ್ಟಿಸುತ್ತಿವೆ‘ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೇಸರ ವ್ಯಕ್ತಪಡಿಸಿದ್ದಾರೆ.

ಲಾಲ್‌ಬಾಗ್ ಉದ್ಯಾನದಲ್ಲಿ 'ಬೆಂಗಳೂರು ನಡಿಗೆ' ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

'ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು ನೀವು ಮುಖ್ಯಮಂತ್ರಿ ಆಗಬೇಕು, ಅ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ಸುದ್ದಿ ತಿದ್ದಿ ಪ್ರಸಾರ ಮಾಡುತ್ತಿವೆ. ನೀವು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬೇಡಿ' ಎಂದು ತಿಳಿಸಿದ್ದಾರೆ.

ADVERTISEMENT

'ನಾನು ಸಿಎಂ ಹುದ್ದೆ ಅಲಂಕರಿಸುವ ಆತುರದಲ್ಲಿ ಇಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. ನೀವು ಇದೇ ರೀತಿ ಸುದ್ದಿ ತಿರುಚುವುದಾದರೆ, ನಾನು ನಿಮಗೆ ಸಹಕಾರ ನೀಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ, ಮಾಧ್ಯಮಗೋಷ್ಠಿ ಕರೆಯುವುದೂ ಇಲ್ಲ' ಎಂದು ಬೇಸರದಿಂದ ಹೇಳಿದ್ದಾರೆ.

'ನಾನು ಆ ಹೇಳಿಕೆ ಎಲ್ಲಿ ಹೇಳಿದ್ದೇನೆ. ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ. ನಾನು ಆ ರೀತಿ ಹೇಳಿಲ್ಲ, ಅದರ ಅಗತ್ಯವೂ ನನಗೆ ಇಲ್ಲ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೋ ಕೊಡಲಿ. ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರೀಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ಆದರೆ ಒಳ್ಳೆಯ ಕೆಲಸ ಬಿಟ್ಟು ವಿವಾದ ಸೃಷ್ಟಿಸಲು ಕೆಲವು ಮಾಧ್ಯಮಗಳು ಪ್ರಯತ್ನಿಸುತ್ತಿವೆ' ಎಂದಿದ್ದಾರೆ.

'ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.