ಡಿ.ಕೆ.ಶಿವಕುಮಾರ್‌ಗೆ ಕಪ್ಪು ಬಟ್ಟೆ ಪ್ರದರ್ಶನ
ಸೂರಗೊಂಡನಕೊಪ್ಪ: ಇಲ್ಲಿನ ಭಾಯಾಗಡ್‌ದಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್ ಅವರ 287ನೇ ಜಯಂತಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಜಾರ ಸಮುದಾಯದ ಜನರು ಕಪ್ಪು ಬಟ್ಟೆ ಪ್ರದರ್ಶಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂದು ವಿರೋಧ ದಾಖಲಿಸಿದರು.
ಡಿ.ಕೆ.ಶಿವಕುಮಾರ್ ಅವರು ವೇದಿಕೆಗೆ ಬರುತ್ತಿದ್ದಂತೆ ಸಭಾಂಗಣದಲ್ಲಿದ್ದ ಬಹುತೇಕ ಯುವಕರು ಎದ್ದು ನಿಂತು ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು. ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಒಳಮೀಸಲಾತಿ ನೀತಿಯಿಂದ ಸಮುದಾಯಕ್ಕೆ ದೊಡ್ಡ ಅನ್ಯಾಯ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಉಪಮುಖ್ಯಮಂತ್ರಿ ಮುಜುಗರಕ್ಕೆ ಒಳಗಾದರು.
ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಒಳಮೀಸಲಾತಿ ವಿರೋಧಿಸುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ಇದರಿಂದ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು.
ಆಗ ಧ್ವನಿವರ್ಧಕದ ಬಳಿಗೆ ಬಂದ ಮಾಜಿ ಶಾಸಕ ಪಿ.ರಾಜೀವ್, ‘ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ಅವರಿಗೆ ಗೌರವ ಕೊಡುವುದು ಸಮುದಾಯದ ಜವಾಬ್ದಾರಿ. ಕುಪಿತಗೊಂಡವರ ಮನವೊಲಿಸುತ್ತೇವೆ. ಪೊಲೀಸರು ಯಾರನ್ನಾದರೂ ಬಂಧಿಸಿದರೆ ಸುಮ್ಮನೆ ಕೂರಲ್ಲ’ ಎಂದು ಎಚ್ಚರಿಕೆ ನೀಡಿದರು.
ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ‘ಇದು ಧಾರ್ಮಿಕ ಕಾರ್ಯಕ್ರಮ. ಸಮುದಾಯದ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಸಮುದಾಯದ ಜನರು ಇದಕ್ಕೆ ಸಹಕಾರ ನೀಡಬೇಕು. ಎರಡು ದಿನ ಇಲ್ಲೇ ಇರುತ್ತೇನೆ. ಎಲ್ಲರೂ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳೋಣ’ ಎಂದಾಗ ಸಭಿಕರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಉಪಸಭಾಧ್ಯಕ್ಷರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದರು. ಪಿ.ರಾಜೀವ್ ಪರ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.