ADVERTISEMENT

ನರೇಗಾ: ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಬರಲಿ; ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 16:14 IST
Last Updated 11 ಜನವರಿ 2026, 16:14 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ನರೇಗಾ ವಿಚಾರವಾಗಿ ವಿರೋಧ ಪಕ್ಷಗಳ ಜತೆ ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ. ಯಾವಾಗ ಕರೆದರೂ ಹೋಗುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಶಿವಕುಮಾರ್ ಅವರು ಪಂಥಾಹ್ವಾನ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮತ್ತೋರ್ವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಚರ್ಚೆ ನಾವೂ ಸಿದ್ಧ’ ಎಂದಿದ್ದರು.

ಈ ಬಗ್ಗೆ ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಶಿವಕುಮಾರ್, ‘ಕುಮಾರಸ್ವಾಮಿ ಅವರೇ ಚರ್ಚೆಗೆ ಬಂದರೆ ಒಳ್ಳೆಯದು. ಅವರನ್ನು ವೇದಿಕೆಗೆ ಸ್ವಾಗತಿಸುತ್ತೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರ ಜತೆಗೂ ಚರ್ಚಿಸಲು ಪಂಥಾಹ್ವಾನ ಸ್ವೀಕರಿಸಿದ್ದೇನೆ. ಚರ್ಚೆಗೆ ಅಗತ್ಯವಾದ ಎಲ್ಲ ಮಾಹಿತಿಗಳು ನನ್ನ ಬೆರಳ ತುದಿಯಲ್ಲೇ ಇವೆ’ ಎಂದರು.

ADVERTISEMENT

'ಸಾರ್ವಜನಿಕ ವೇದಿಕೆ, ಅಧಿವೇಶನ ಅಥವಾ ಮಾಧ್ಯಮ ವೇದಿಕೆಯಾದರೂ ಸರಿ. ಚರ್ಚೆಗೆ ನಾನು ಸಿದ್ಧ’ ಎಂದು ಸವಾಲು ಒಡ್ಡಿದರು.

‘ನರೇಗಾ ಯೋಜನೆ ಜಾರಿಯಲ್ಲಿ ಕನಕಪುರ ಮೊದಲ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಪ್ರಶಸ್ತಿಯನ್ನೂ ನೀಡಿದೆ. ಈ ವಿಚಾರ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿಜಯೇಂದ್ರ ಅವರಿಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರಲಿದ್ದಾರಂತೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ರಾಜ್ಯ ರಾಜಕಾರಣ ಮಾತ್ರ ಏಕೆ? ಹಳ್ಳಿಯಿಂದಲೇ ರಾಜಕಾರಣವನ್ನೂ ಮಾಡಲಿ’ ಎಂದು ಹೇಳಿದರು.

‘ಎಚ್‌ಡಿಕೆ ಡೈಲಾಗ್‌ ಅಷ್ಟೆ’: ‘ಸಿದ್ದರಾಮಯ್ಯ ಅವರನ್ನು ಲೀಸ್‌ನಲ್ಲಿರುವ ಮುಖ್ಯಮಂತ್ರಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

‘ಮಾಧ್ಯಮಗಳ ಮುಂದೆ ಮೊದಲಿನಿಂದಲೂ ಅವರು ಇಂತಹ ಡೈಲಾಗ್‌ಗಳನ್ನು ಹೊಡೆಯುತ್ತಲೇ ಬಂದಿದ್ದಾರೆ. ಇಂತಹ ‌‌‌‌ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡುತ್ತಾರೆ. ಆ ಸಾಮರ್ಥ್ಯ ಅವರಿಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.