ADVERTISEMENT

ಡಿಕೆಶಿ ವಹಿವಾಟು: ತನಿಖೆಗೆ ಪತ್ರ?

ಚುನಾವಣಾ ಆಯೋಗ, ಸೆಬಿಗೆ ಐ.ಟಿ ಮನವಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:52 IST
Last Updated 21 ಫೆಬ್ರುವರಿ 2019, 19:52 IST

ಬೆಂಗಳೂರು: ರಾಜ್ಯದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಡೆಸಿರುವ ಭಾರಿ ಹಣಕಾಸು ವಹಿವಾಟು ಕುರಿತು ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಯು ಚುನಾವಣಾ ಆಯೋಗ ಮತ್ತು ಸೆಬಿಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.

2008ರ ಚುನಾವಣೆ ಸಮಯದಲ್ಲಿ ಶಿವಕುಮಾರ್‌ ಆಸ್ತಿ ಮೌಲ್ಯ ₹ 75ಕೋಟಿ ಇತ್ತು. 2018ರ ಚುನಾವಣೆಯಲ್ಲಿ ಭಾರಿ ಆಸ್ತಿ ಹೊಂದಿದ್ದಾರೆ. ಕೇವಲ 10 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಸ್ತಿ ಮೌಲ್ಯ ಏರಲು ಅಸಾಧ್ಯ. ಅಲ್ಲದೆ, ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದೆ ಎನ್ನಲಾಗಿದೆ.

‘ತಮ್ಮ ತಾಯಿ ಹೆಸರಿನಲ್ಲಿ ಶಿವಕುಮಾರ್‌ ಭಾರಿ ವಹಿವಾಟು ನಡೆಸಿದ್ದಾರೆ. ಕೃಷಿ ಆದಾಯವೆಂದು ತೋರಿಸಿ ಅವರ ಹೆಸರಿನಲ್ಲಿ ಆಸ್ತಿ ಖರೀದಿಸಲಾಗಿದೆ. ಬಳಿಕ ಇದನ್ನು ತಮ್ಮ ಹೆಸರಿಗೆ ಮತ್ತು ಪುತ್ರಿ ಹೆಸರಿಗೆ ವರ್ಗಾವಣೆ ಮಾಡಿಸಲಾಗಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ADVERTISEMENT

ಸೆಬಿಗೆ ಬರೆದಿರುವ ಪತ್ರದಲ್ಲಿ ಪ್ರತಿಷ್ಠಿತ ಖಾಸಗಿ ರಿಯಲ್‌ ಎಸ್ಟೇಟ್‌ ಕಂಪೆನಿಯನ್ನು ಪಬ್ಲಿಕ್ ಲಿ. ಕಂಪನಿಯಾಗಿ ಪರಿವರ್ತಿಸಿ ಹಣ ಸಂಗಹಿಸಲಾಗಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದೆ

ಈ ಪತ್ರ ಬರೆದಿರುವ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕೃತವಾಗಿ ಏನೂ ಹೇಳಿಲ್ಲ. ಶಿವಕುಮಾರ್‌ ಅವರೂ ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.