ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆ | ಪುನರ್‌ವಸತಿಗೆ 40 ಸದಸ್ಯರ ಸಮಿತಿ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 16:15 IST
Last Updated 18 ಡಿಸೆಂಬರ್ 2025, 16:15 IST
   

ಸುವರ್ಣ ವಿಧಾನಸೌಧ (ಬೆಳಗಾವಿ): ಕೆರೆ, ಕುಂಟೆ, ಕಾಲುವೆ, ಅಣೆಕಟ್ಟು ಸೇರಿದಂತೆ ಸರ್ಕಾರಿ ಯೋಜನೆಗಳಿಗಾಗಿ ಭೂಮಿ ನೀಡಿದವರು ಸ್ವಾತಂತ್ರ್ಯ ಹೋರಾಟಗಾರಿಗೆ ಸಮಾನ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ ಭೂಮಿ ನೀಡಿದವರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಮನೆ, ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪುನರ್‌ ವಸತಿ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕುರಿತು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಹಣಮಂತ ನಿರಾಣಿ, ಪಿ.ಎಚ್.ಪೂಜಾರ್‌ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಅವರು,  ಪುನರ್ ವಸತಿ ಅನುಷ್ಠಾನಕ್ಕಾಗಿ 40 ಸದಸ್ಯರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗುವುದು. ಭೂಮಿ ಕಳೆದು ಕೊಂಡ ಕುಟುಂಬದ ಸದಸ್ಯರಿಗೆ ಉದ್ಯೋಗ, ಎಕರೆಗೆ ತಲಾ ₹40 ಲಕ್ಷ ಪರಿಹಾರ ನೀಡಲಾಗುವುದು ಎಂದರು.

ಕೆಲವರು ಹೆಚ್ಚು ಪರಿಹಾರ ಧನ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಷ್ಟೊಂದು ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಕೆಲ ಪ್ರಕರಣಗಳಲ್ಲಿ ₹8 ಲಕ್ಷ ನೀಡುವ ಜಮೀನಿಗೆ ₹10 ಕೋಟಿ ಪರಿಹಾರ ನೀಡಲು ಕೋರ್ಟ್‌ ಸೂಚಿಸಿದೆ. ಆ ರೀತಿ ಮಾಡಿದರೆ ಯೋಜನಾ ವೆಚ್ಚ ಗಣನೀಯವಾಗಿ ಹೆಚ್ಚಳವಾಗಲಿದೆ. ಈಗಾಗಲೇ ಕೋರ್ಟಿಗೆ ಹೋಗಿರುವ ಸಂತ್ರಸ್ತರನ್ನು ಮನ ಒಲಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ರಾಜ್ಯಕ್ಕೆ ಸಿಗಬೇಕಾಗಿದ್ದ ಭೀಮಾನದಿಯ ನೀರಿನ ಪಾಲನ್ನು ಸೀನಾ ನದಿಯ ಕಳ್ಳ ಸುರಂಗ ಮಾರ್ಗದ ಮೂಲಕ ಮಹಾರಾಷ್ಟ್ರ ಉಪಯೋಗಿಸಿಕೊಳ್ಳುತ್ತಿದೆ. ಅಫ್ಜಲ್‌ಪುರದಲ್ಲಿ ಭೀಮಾನದಿಗೆ ಬ್ಯಾರೇಜ್‌ ನಿರ್ಮಾಣ ಮಾಡಲಾಗಿದ್ದು, ಮಹಾರಾಷ್ಟ್ರ 95 ಟಿಎಂಸಿ ಅಡಿ ಮತ್ತು ಕರ್ನಾಟಕ 15 ಟಿಎಂಸಿ ಅಡಿ ನೀರು ಪಡೆಯಬೇಕು. ಆದರೆ, ಸುರಂಗ ಮಾರ್ಗದ ಮೂಲಕ 100 ಟಿಎಂಸಿ ಅಡಿ ಬಳಕೆ ಮಾಡಿಕೊಳ್ಳುತ್ತಿದೆ. ಈ ನೀರು ಉಳಿಸಿದರೆ  ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗಲಿದೆ ಎಂಬ ಬಿಜೆಪಿಯ ತಳವಾರ್‌ ಸಾಬಣ್ಣ ಅವರ ಸಲಹೆಗೆ ಪ್ರತಿಕ್ರಿಯಿಸಿದ ಅವರು, ‘ವರದಿ, ದಾಖಲೆಗಳಿದ್ದರೆ ಒದಗಿಸಬೇಕು. ಅಧಿಕಾರಿಗಳ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿ, ಪರಿಶೀಲನೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.