ADVERTISEMENT

ಬಿಜೆಪಿಗೆ ರಾಜಕಾರಣಕ್ಕಾಗಿ ದೇವರು ಬೇಕು: ಡಿ.ಕೆ. ಶಿವಕುಮಾರ್

‘ಘಂಟಾನಾದ ಶೀರ್ಷಿಕೆ’ ಭಾಗ–2ರ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:05 IST
Last Updated 21 ಅಕ್ಟೋಬರ್ 2024, 16:05 IST
<div class="paragraphs"><p>‘ಘಂಟನಾದ ಶೀರ್ಷಿಕೆ ಭಾಗ – 2’ ರಾಜ್ಯಮಟ್ಟದ ಸಮಾವೇಶ ಕಾರ್ಯಕ್ರಮವನ್ನು&nbsp;ಗಂಟೆ ಬಾರಿಸುವುದರ ಮೂಲಕ ಉದ್ಘಾಟಿಸಲಾಯಿತು. (&nbsp;</p></div>

‘ಘಂಟನಾದ ಶೀರ್ಷಿಕೆ ಭಾಗ – 2’ ರಾಜ್ಯಮಟ್ಟದ ಸಮಾವೇಶ ಕಾರ್ಯಕ್ರಮವನ್ನು ಗಂಟೆ ಬಾರಿಸುವುದರ ಮೂಲಕ ಉದ್ಘಾಟಿಸಲಾಯಿತು. ( 

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ದೇವರು ಬೇಕು. ದೇವಸ್ಥಾನಗಳ ಜೀರ್ಣೋದ್ಧಾರ ಅವರಿಗೆ ಬೇಡ. ಆದ್ದರಿಂದಲೇ ದೇವಸ್ಥಾನಗಳಿಗೆ ನಾವು ಒಳಿತು ಮಾಡಲು ಮುಂದಾಗಿದ್ದರೂ, ಅದಕ್ಕೆ ತಡೆಯಾಗಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ದೂರಿದರು.

ADVERTISEMENT

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸೋಮವಾರ ಆಯೋಜಿಸಿದ್ದ ‘ಘಂಟಾನಾದ ಶೀರ್ಷಿಕೆ’ ಭಾಗ–2ರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಧರ್ಮ ಮತ್ತು ರಾಜಕಾರಣ ಬೇರೆ ಬೇರೆ. ರಾಜಕಾರಣದಲ್ಲಿ ಧರ್ಮ ಬೆರೆಸಬಾರದು ಎಂಬುದು ನಮ್ಮ ನಿಲುವು. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮಸೂದೆಯನ್ನು ತಂದು, ಒಪ್ಪಿಗೆ ಪಡೆದಿದ್ದೇವೆ. ಆದರೆ, ಅದಕ್ಕೆ ರಾಜ್ಯಪಾಲರು ಸಹಿ ಹಾಕದಂತೆ ಬಿಜೆಪಿಯವರು ತಡೆಹಾಕಿದ್ದಾರೆ’ ಎಂದು ಆರೋಪಿಸಿದರು.

‘ಎಲ್ಲ ಧರ್ಮ, ಜಾತಿಯವರೂ ಇರುವ ಒಕ್ಕೂಟದ ಅರ್ಚಕರು ತಸ್ತೀಕ್ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದೀರಿ. ನಿಮ್ಮ ಒಳಿತಿಗಾಗಿ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಅರ್ಚಕರಿಗೆ ₹5 ಲಕ್ಷದವರೆಗೆ ವಿಮೆ, ವರ್ಷಕ್ಕೆ ಕನಿಷ್ಠ  3 ಸಾವಿರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕಡ್ಡಾಯ, ಎ, ಬಿ ಪ್ರವರ್ಗದ ದೇವಸ್ಥಾನದ ವರಮಾನದಿಂದ ವರ್ಷಕ್ಕೆ ಒಂದು ಸಾವಿರ ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಹಣ ವಿನಿಯೋಗ, ಅರ್ಚಕರ ಮನೆ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಮಂಡಿಸಲಾಗಿದೆ. ರಾಜ್ಯಪಾಲರು ಇದಕ್ಕೆ ಒಪ್ಪಿಗೆ ನೀಡಿಲ್ಲ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

‘ತಿಂಗಳಿಗೆ ₹10 ಸಾವಿರ ತಸ್ತೀಕ್‌ ಸೇರಿದಂತೆ ಅರ್ಚಕರು ಸಲ್ಲಿಸಿರುವ 9 ಬೇಡಿಕೆಗಳಲ್ಲಿ ಬಹುತೇಕ ಅಂಶಗಳು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿದ್ದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಡಾ. ಪರಮೇಶ್ವರ ಹಾಗೂ ಒಕ್ಕೂಟದ ಗೌರವ ಅಧ್ಯಕ್ಷರೂ ಆಗಿರುವ ಸಚಿವ ದಿನೇಶ್‌ ಗುಂಡೂರಾವ್‌ ಅವರು ಈ ಸಮಾರಂಭದಲ್ಲಿ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ. ನಾವೆಲ್ಲ ಸೇರಿ ಮುಂದಿನ ಬಜೆಟ್‌ನಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ’ ಎಂದು ಭರವಸೆ ನೀಡಿದರು.

ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಇ. ರಾಧಾಕೃಷ್ಣ, ಗೌರವ ಉಪಾಧ್ಯಕ್ಷ ಎಸ್‌.ಆರ್‌. ಶೇಷಾದ್ರಿ ಭಟ್ಟರ್‌, ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಎನ್‌. ದೀಕ್ಷಿತ್‌ ಉಪಸ್ಥಿತರಿದ್ದರು.

ಹಿಂದೂಗಳಿಗೆ ತೊಂದರೆ ನೀಡಿಲ್ಲ: ದಿನೇಶ್‌ ಗುಂಡೂರಾವ್‌

‘ನಮ್ಮ ಸರ್ಕಾರ ಹಿಂದೂಗಳಿಗೆ ತೊಂದರೆ ನೀಡುವ ಕೆಲಸ ಮಾಡಿಲ್ಲ. ನಮ್ಮಲ್ಲಿ ಎಲ್ಲ ಧರ್ಮ ಜಾತಿ ಎಡ–ಬಲ ಸಮಾಜವಾದಿ ಸಿದ್ಧಾಂತವರೂ ಇದ್ದಾರೆ. ನಮ್ಮ ಮೇಲೆ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ‘ದೇವಸ್ಥಾನಗಳಿಗೆ ಅರ್ಚಕರಿಗೆ ಅತಿಹೆಚ್ಚು ಸೌಲಭ್ಯವನ್ನು ನಾವೇ ನೀಡಿರುವುದು. ಮುಜರಾಯಿ ಸಚಿವರಾಗಿ ರಾಮಲಿಂಗಾರೆಡ್ಡಿ ಇನ್ನೂ 10 ವರ್ಷ ಇರಲಿ ಎಂದು ನೀವೇ ಹೇಳಿದ್ದೀರಿ. ಅದರರ್ಥ ನಾವು ಒಳಿತನ್ನೇ ಮಾಡುತ್ತಿದ್ದೇವೆ ಎಂದಲ್ಲವೇ’ ಎಂದು ಪ್ರಶ್ನಿಸಿದರು. ‘ನಮ್ಮ ಐದು ಗ್ಯಾರಂಟಿಗಳು ನಮ್ಮ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಎಂದು ನಾವೇನು ಹೇಳಿಲ್ಲ. ಎಲ್ಲರೂ ಅದರ ಸೌಲಭ್ಯ ಪಡೆಯುತ್ತಿದ್ದಾರೆ. ಈ ಗ್ಯಾರಂಟಿಗಳಿಗೆ ₹56 ಸಾವಿರ ಕೋಟಿ ಹೊಂದಿಸುವುದು ಕಷ್ಟವಿರಬಹುದು. ಆದರೆ ಸರ್ವರ ಹಿತಕ್ಕಾಗಿ ಅದನ್ನು ನೀಡುತ್ತಲೇ ಇರುತ್ತೇವೆ. ಅನುಮಾನ ಬೇಡ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.