ADVERTISEMENT

ಕೋರಿಕೆಗೆ ಸಿಕ್ಕ 'ಪ್ರಸಾದ': ದೇವಸ್ಥಾನದಿಂದ ಖುಷಿಯಿಂದ ತೆರಳಿದ ಡಿ.ಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 11:20 IST
Last Updated 19 ಡಿಸೆಂಬರ್ 2025, 11:20 IST
   

ಕಾರವಾರ: ಅಂಕೋಲಾದ ಆಂದ್ಲೆ ಗ್ರಾಮದಲ್ಲಿನ ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮರಳುವಾಗ ಸಂತಸದಲ್ಲಿದ್ದರು. ಇನ್ನೊಂದು ತಿಂಗಳಲ್ಲಿ ಪುನಃ ಬರುವುದಾಗಿ ಭರವಸೆ ನೀಡಿದ್ದಾರೆ.

ತಮ್ಮ ಜೊತೆಗಿದ್ದ ಸಚಿವ, ಶಾಸಕ, ಮಾಜಿ ಶಾಸಕರನ್ನು ದೂರವಿಟ್ಟು ದೇವಾಲಯದ ಗರ್ಭಗುಡಿಯಲ್ಲಿ  ತಾಸಿಗೂ ಹೆಚ್ಚು ಕಾಲ ಪ್ರಾರ್ಥಿಸಿ, ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕ ಗಣೇಶ ನಾಯ್ಕ ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.

'ಐದು ವರ್ಷಗಳ ಹಿಂದೆ ಇದೇ ಸ್ಥಳಕ್ಕೆ ಬಂದು ಕುಟುಂಬ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದ್ದರು. ಅದು ಈಡೇರಿದ ಬಳಿಕ ಬಂದು ಪೂಜೆ ಸಲ್ಲಿಸಿದ್ದೆ. ಈಗಲೂ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಲು ಬಂದಿದ್ದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ADVERTISEMENT

'ಜಗದೀಶ್ವರಿ ದೇವಿ ಸನ್ನಿಧಿಯಲ್ಲಿ ಯಾರೇ ಇಷ್ಟಾರ್ಥ ಸಿದ್ಧಿಗೆ ದೇವಿಗೆ ಅಲಂಕಾರ ಮಾಡಿಸಿ, ಪ್ರಶ್ನೆ ಕೇಳಿಸುತ್ತಾರೆ. ಭಕ್ತರ ಕೋರಿಕೆ ಈಡೇರುವುದಿದ್ದರೆ ದೇವಿ ಐದು ರೂಪದಲ್ಲಿ ಪ್ರಸಾದ ನೀಡುತ್ತಾಳೆ. ಡಿ.ಕೆ.ಶಿವಕುಮಾರ್ ಅವರು ಹಲವು ಬಾರಿ ಪ್ರಶ್ನೆ ಕೇಳಿದಾಗಲೂ ಅವರಿಗೆ ದೇವಿ ಪ್ರಸಾದ ಕರುಣಿಸಿದ್ದಾಳೆ' ಎಂದು ಅರ್ಚಕ ಗಣೇಶ ನಾಯ್ಕ ಪ್ರತಿಕ್ರಿಯಿಸಿದರು.

'ಏನು ಕೋರಿಕೆ ಮುಂದಿಟ್ಟರು ಎಂಬುದನ್ನು ಅವರು ಹೇಳಲಿಲ್ಲ. ಆದರೆ, ಪೂಜೆ ಸಲ್ಲಿಸಿದ ಬಳಿಕ ಖುಷಿಯಲ್ಲಿದ್ದರು. ಇನ್ನೊಂದು ತಿಂಗಳಲ್ಲಿ ಪುನಃ ಪೂಜೆ ಸಲ್ಲಿಸಲು ಬರುವುದಾಗಿ ಹೇಳಿಹೋದರು' ಎಂದರು.

'ದೇವಿಯ ಎದುರು ಪ್ರಾರ್ಥಿಸಿಕೊಂಡವರು ಪ್ರಾರ್ಥನೆ ಈಡೇರಿದ ಬಳಿಕ ಪುನಃ ಪೂಜೆ ಸಲ್ಲಿಸುತ್ತಾರೆ. ಡಿ.ಕೆ.ಶಿವಕುಮಾರ ಅವರಿಗೂ ತಮ್ಮ ಕೋರಿಕೆ ಶೀಘ್ರ ಈಡೇರುವ ವಿಶ್ವಾಸ ಇರಬಹುದು. ಅದೇ ಕಾರಣಕ್ಕೆ ಖುಷಿಯಿಂದ ಮರಳಿದರು' ಎಂದೂ ವಿಶ್ಲೇಷಿಸಿದರು.

ಆಂದ್ಲೆಗೆ ಭೇಟಿ ನೀಡುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಗೋಕರ್ಣದ ಮಹಾಬಲೇಶ್ವರ, ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.