ADVERTISEMENT

ನುಡಿದಂತೆ ನಡೆಯದ ಬಿಎಸ್‌ವೈ: ಡಿ.ಕೆ.ಶಿವಕುಮಾರ್

ಪದಗ್ರಹಣಕ್ಕೆ ಅನುಮತಿ ಕೊಡದ ಸರ್ಕಾರದ ವಿರುದ್ಧ ಕಾನೂನು ಹೋರಾಟ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 20:52 IST
Last Updated 10 ಜೂನ್ 2020, 20:52 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆಯುವವರು, ಸಣ್ಣ ರಾಜಕಾರಣ ಮಾಡುವುದಿಲ್ಲ ಅಂದುಕೊಂಡಿದ್ದೆ. ಆದರೆ ನನ್ನ ಪದಗ್ರಹಣ ವಿಚಾರದಲ್ಲಿ ಆ ನಂಬಿಕೆ ಹುಸಿಯಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪದಗ್ರಹಣ ಸಮಾರಂಭಕ್ಕೆ ಸರ್ಕಾರ ಅನುಮತಿ ನಿರಾಕರಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಸರ್ಕಾರ ಒಪ್ಪಿಗೆ ಕೊಟ್ಡ ಮೇಲಷ್ಟೇ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.‌

‘ಇದು ಇಡೀ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮ. ಯಾವುದೇ ಕಾರಣಕ್ಕೂ ನಾವು ಇದನ್ನು ನಿಲ್ಲಿಸುವುದಿಲ್ಲ. ಈಗ ಯೋಜಿಸಿರುವಂತೆ ರೀತಿಯಲ್ಲೇ ನಡೆಯುತ್ತದೆ. ದಿನಾಂಕವನ್ನು ಮುಂದೆ ತಿಳಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

'ರಾಜ್ಯ ಸರ್ಕಾರದ ಬಹುತೇಕ ಸಚಿವರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅವರ ವಿರುದ್ಧ ಯಾವ ಕ್ರಮವೂ ಇಲ್ಲ. ನಾವು ಕಾನೂನಾತ್ಮಕವಾಗಿ ಅನುಮತಿ ಕೇಳಿದರೆ ಕೊಡುತ್ತಿಲ್ಲ. ಸರ್ಕಾರದ ಈ ದ್ವಂದ್ವ ನಿಲುವು ಅರ್ಥವಾಗುತ್ತಿಲ್ಲ. ಪದಗ್ರಹಣ ಸಮಾರಂಭಕ್ಕೆ ಅನುಮತಿ ನಿರಾಕರಿಸುವುದರ ಹಿಂದೆ ರಾಜಕೀಯ ದುರುದ್ದೇಶ ಕಾಣುತ್ತಿದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಹೀಗಾಗಿ ಅವರು ಅನುಮತಿ ಕೊಟ್ಟಾಗಲೇ ಕಾರ್ಯಕ್ರಮ ಮಾಡುತ್ತೇವೆ' ಎಂದು ಹೇಳಿದರು.

'ನಾನು ಮನೆಯಲ್ಲಿ ಕೂರಲ್ಲ. ‌ವಿಧಾನ ಪರಿಷತ್ ಚುನಾವಣೆ ಬಳಿಕ ರಾಜಕೀಯೇತರ ಪ್ರವಾಸ ಮಾಡುತ್ತೇನೆ. ‌ಕೊರೊನಾದಲ್ಲಿ ಜನರ ಕಷ್ಟಗಳೇನು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ಯಾಕೇಜ್ ತಲುಪಿದೆಯಾ ಎಂದು‌ ಕೇಳುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ. ನಮ್ಮ ಪಕ್ಷದ ಎಲ್ಲಾ ನಾಯಕರು ಈ ಪ್ರವಾಸದಲ್ಲಿ ಭಾಗವಹಿಸುತ್ತಾರೆ. ಬಾವುಟ ಬಳಸುವುದಿಲ್ಲ’ ಎಂದರು.

‘ನಕಲು ಮಾಡಿದ ಬಿಜೆಪಿ’
‘ಆನ್‌ಲೈನ್ ಕಾರ್ಯಕ್ರಮ ನಮ್ಮ ಚಿಂತನೆಯಾಗಿತ್ತು. ಅದನ್ನು ಬಿಜೆಪಿ ನಕಲು ಮಾಡಿದೆ. ನಮಗೆ ಅನುಮತಿ ನಿರಾಕರಿಸಿ ಬಿಜೆಪಿ ವತಿಯಿಂದ ನಮ್ಮದೇ ರೀತಿಯಲ್ಲಿ ವರ್ಚುವಲ್ ಕಾರ್ಯಕ್ರ‌ಮ ಮಾಡಲಾಗುತ್ತಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪ ಕಾನೂನನ್ನು ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ’ ಎಂದು ಶಿವಕುಮಾರ್‌ ದೂರಿದರು.‌

**

ನನಗೆ ಮುಖ್ಯಮಂತ್ರಿಯವರ ಪ್ರೀತಿ ಬೇಕಿಲ್ಲ. ಜನರ ಪ್ರೀತಿ ಇದ್ದರೆ ಸಾಕು. ಶೀಘ್ರ ಜನರತ್ತ ತೆರಳಿ ಅವರ ಕಷ್ಟ ಆಲಿಸುತ್ತೇನೆ
-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.