
ಬೆಂಗಳೂರು: ‘ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯದ ಎಲ್ಲ ನಗರಗಳಲ್ಲಿ ಸಂಚಾರ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ದತ್ತಾಂಶ ಕೇಂದ್ರ, ಜಾಗತಿಕ ಸಾಮರ್ಥ್ಯ ಕೇಂದ್ರ, ಆಹಾರ ಮತ್ತು ಪಾನೀಯ, ವಿಮಾನಯಾನ, ನವೀಕೃತ ಇಂಧನ, ಎಲೆಕ್ಟ್ರಿಕ್ ವಾಹನ, ಎಲೆಕ್ಟ್ರಾನಿಕ್ಸ್, ಸುಧಾರಿತ ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದಾವೋಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ’ ಎಂದರು.
‘ಕೆಲವು ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ಹೊಂದಿವೆ. ಅದಕ್ಕೆ ಪೂರಕವಾಗಿ ನಗರಗಳು ಯುವ ಪ್ರತಿಭೆಗಳನ್ನು ಹೊಂದಿರಬೇಕು. ಸಂಚಾರ ಮಾರ್ಗ, ವರ್ತುಲ ರಸ್ತೆಗಳಿಗೆ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ನಗರ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲು ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ ಸಚಿವರ ಜೊತೆ ನಡೆಸಲಾಗುವುದು’ ಎಂದರು.
‘ರಾಜ್ಯದಲ್ಲಿ ನೀರಿನ ಲಭ್ಯತೆ, ವಿದ್ಯುತ್ ಪ್ರಮಾಣ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕಂಪನಿಗಳು ಪಡೆದಿವೆ. ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು ಶೇ 70ರಷ್ಟು ನಗರ ಪ್ರದೇಶಕ್ಕೆ ವರ್ಗಾವಣೆ ಆಗಬಹುದೆಂದು ಕೆಲವು ಕಂಪನಿಗಳು ಅಂದಾಜಿಸಿದ್ದು, ಅದಕ್ಕೆ ಯಾವ ತಯಾರಿ ನಡೆಸಿದ್ದೀರೆಂದು ಪ್ರಶ್ನಿಸಿದರು. ಕಂಪನಿಗಳ ಮುಖ್ಯಸ್ಥರು, ಅನಿವಾಸಿ ಭಾರತೀಯ ಉದ್ಯಮಿಗಳು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಜೊತೆ ದಾವೋಸ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ, ಇಲ್ಲೇ ಸಹಿ ಹಾಕಲು ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.
‘ವಿಶ್ವ ಬ್ಯಾಂಕಿನ ಮುಖ್ಯಸ್ಥ ಅಜಯ್ ಬಂಗಾ, ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಹಾಗೂ ಹಲವು ದೇಶಗಳ ಸಚಿವರನ್ನು ದಾವೋಸ್‌ನಲ್ಲಿ ನಾನು ಭೇಟಿ ಮಾಡಿದ್ದೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಲ್ಹಾದ ಜೋಷಿ, ರಾಮ್ ಮೋಹನ್ ನಾಯ್ಡು ಕೂಡಾ ಅಲ್ಲಿಗೆ ಬಂದಿದ್ದರು. ಚೀನಾ ಹೊರತುಪಡಿಸಿದರೆ, ಭಾರತದ ದಕ್ಷಿಣದ ರಾಜ್ಯಗಳಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣವಿದೆ ಎಂದು ಅನೇಕ ಉದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದೂ ಹೇಳಿದರು.
ಬಂಡವಾಳ ಆಕರ್ಷಿಸಲು ಉತ್ತಮ ವೇದಿಕೆ: ‘ಇಡೀ ದಾವೋಸ್ ನಮ್ಮ ಸದಾಶಿವನಗರ, ಅರಮನೆ ಮೈದಾನದಷ್ಟು ವ್ಯಾಪ್ತಿಯಲ್ಲಿರಬಹುದು. ಅಷ್ಟು ಸಣ್ಣ ಪ್ರದೇಶದಲ್ಲಿ ಎಲ್ಲ ಪ್ರಮುಖ ನಾಯಕರು ರಸ್ತೆ ಮಾರ್ಗದಲ್ಲೇ ಸಂಚಾರ ಮಾಡಿದರು. ನಾನು ಜ್ಯೂರಿಚ್ ಕಡೆ 200 ಕಿ.ಮೀ ಪ್ರಯಾಣ ಮಾಡುವಾಗ ಸುಮಾರು 30-40 ಸುರಂಗ ರಸ್ತೆಗಳ ಮೂಲಕ ಹೋದೆ. 60 ವರ್ಷಗಳ ಹಿಂದೆಯೇ ಸುರಂಗ ರಸ್ತೆ ನಿರ್ಮಿಸಿದ್ದಾರೆ. ಅಲ್ಲಿ ಶಿಸ್ತು, ಸಂಚಾರ ಪ್ರಜ್ಞೆ, ಕಾನೂನು ಪಾಲನೆ ಬಗ್ಗೆ ಗಮನಿಸಿದೆ. ಈ ಪ್ರವಾಸ ರಾಜ್ಯಕ್ಕೆ ಫಲಪ್ರದಾಯಕ ಕಾರ್ಯಕ್ರಮವಾಗಿತ್ತು. ನಮ್ಮಲ್ಲಿಗೆ ಬಂಡವಾಳ ಆಕರ್ಷಿಸಿ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಉತ್ತಮ ವೇದಿಕೆಯಾಗಿತ್ತು’ ಎಂದು ಅಭಿಪ್ರಾಯಪಟ್ಟರು.
ನಮ್ಮ ಸುರಂಗ ರಸ್ತೆ ಆಧುನಿಕವಾಗಿದೆ. ನಮ್ಮ ಮಾದರಿಯಲ್ಲೇ ಮಹಾರಾಷ್ಟ್ರದವರು ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (ಜೈಕಾ) ಜೊತೆ ಒಪ್ಪಂದ ಮಾಡಿಕೊಂಡಿದ್ದಾರಂತೆ. ನಾನು ಕೂಡ ಜಪಾನ್‌ಗೆ ತೆರಳಿ ನೋಡುತ್ತೇನೆ. ಎರಡನೇ ಸುರಂಗ ರಸ್ತೆಗೆ ಸಹಾಯ ಪಡೆಯುವ ಬಗ್ಗೆ ಜೈಕಾ ಜೊತೆ ಚರ್ಚೆ ಮಾಡಲಾಗುವುದು’ ಎಂದು ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.