ADVERTISEMENT

ಡಿಕೆಶಿ 500 ಕೋಟಿ ಬೇನಾಮಿ ಆಸ್ತಿ ಜಪ್ತಿ

20 ಎಕರೆ ಜಮೀನಿನ ಸಂಬಂಧ ಗೌರಮ್ಮಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:17 IST
Last Updated 27 ಏಪ್ರಿಲ್ 2019, 20:17 IST
   

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ₹ 500 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ (ಐ.ಟಿ) ಇಲಾಖೆ ಜಪ್ತಿ ಮಾಡಿದ್ದು, ಇನ್ನೂ 20 ಎಕರೆ ಜಮೀನಿನ ಖರೀದಿ ಮೂಲ ಬಹಿರಂಗಪಡಿಸುವಂತೆ ನೋಟಿಸ್‌ ನೀಡಿದೆ.

ಈ ಆಸ್ತಿಯನ್ನು ಅಭಿವೃದ್ಧಿಪಡಿಸಲು ‘ಶೋಭಾ ಡೆವಲಪರ್ಸ್‌’ ಜೊತೆ ಶಿವಕುಮಾರ್‌ ಅವರ ತಾಯಿ ಗೌರಮ್ಮ ಜಂಟಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನು ಅಭಿವೃದ್ಧಿಪಡಿಸಿದ ಬಳಿಕ ಗೌರಮ್ಮನವರ ಪಾಲಿನ ಆಸ್ತಿ ಮೌಲ್ಯ ₹ 235 ಕೋಟಿ ಎಂದು ‘ಹಣಕಾಸು ಸಚಿವಾಲಯದ ಮೇಲ್ಮನವಿ ನ್ಯಾಯಮಂಡಳಿ’ಗೆ ಸಲ್ಲಿಸಿದ ವರದಿಯಲ್ಲಿ ಐ.ಟಿ ತಿಳಿಸಿದೆ. ಆದರೆ, ಇದರ ಮಾರುಕಟ್ಟೆ ಮೌಲ್ಯ ₹ 500 ಕೋಟಿ ಎಂದು ಅಂದಾಜಿಸಲಾಗಿದೆ.

ಸಚಿವರು ಹೊಂದಿದ್ದಾರೆ ಎನ್ನಲಾದ ಹಲವು ಬೇನಾಮಿ ಆಸ್ತಿಗಳ ಬಗ್ಗೆಯೂ ಐ.ಟಿ ಪರಿಶೀಲನೆ ನಡೆಸುತ್ತಿದ್ದು, ಗೌರಮ್ಮನವರ ಹೆಸರಿನಲ್ಲಿರುವ ಇನ್ನೂ 20 ಎಕರೆ ಜಮೀನಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಇದು ಗೌರಮ್ಮನವರಿಗೆ ನೀಡುತ್ತಿರುವ ಎರಡನೇ ನೋಟಿಸ್‌ ಎಂದೂ ಮೂಲಗಳು ಖಚಿತಪಡಿಸಿವೆ.

ADVERTISEMENT

ಈ ಮೊದಲೂ ಐ.ಟಿ ಅಧಿಕಾರಿಗಳು ಗೌರಮ್ಮ ಅವರ ಸುದೀರ್ಘ ವಿಚಾರಣೆ ನಡೆಸಿದ್ದರು. ಸದ್ಯ ಜಪ್ತಿ ಮಾಡಲಾಗಿರುವ ಆಸ್ತಿಗೆ ಸಂಬಂಧಿಸಿದಂತೆ ಸತತ 6 ಗಂಟೆ ವಿಚಾರಣೆ ನಡೆಸಲಾಗಿತ್ತು. ಐ.ಟಿ ಅಧಿಕಾರಿಗಳ ವರ್ತನೆ ಕುರಿತು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಐ.ಟಿ ಪ್ರಧಾನ ಮುಖ್ಯ ಕಮಿಷನರ್‌ ಬಿ.ಆರ್‌. ಬಾಲಕೃಷ್ಣನ್‌ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ, ರಾಜ್ಯದ ಸಂಪುಟ ದರ್ಜೆ ಸಚಿವರೊಬ್ಬರಿಗೆ ಸೇರಿದ ₹ 75 ಕೋಟಿ ಮೌಲ್ಯದ ಆಸ್ತಿ ಒಳಗೊಂಡಂತೆ ₹ 395 ಕೋಟಿಯ ಆಸ್ತಿ ಜಪ್ತಿ ಮಾಡಲಾಗಿದೆ. 36 ಫಲಾನುಭವಿಗಳ 92 ಆಸ್ತಿಗಳು ಇದರಲ್ಲಿವೆ ಎಂದು ತಿಳಿಸಿದ್ದರು.

ಬೇನಾಮಿ ಆಸ್ತಿ ಇದೆಯೇ?

‘ರಾಜ್ಯದಲ್ಲಿ ಶಿವಕುಮಾರ್‌ ಅವರ ಬಳಿ ಮಾತ್ರವೇ ಬೇನಾಮಿ ಆಸ್ತಿ ಇದೆಯೇ; ಬೇರೆ ಪಕ್ಷಗಳ ನಾಯಕರ ಬಳಿ ಇಲ್ಲವೇ‘ ಎಂದು ಸಚಿವರ ಆಪ್ತ ಮೂಲಗಳು‍ಪ್ರಶ್ನಿಸಿವೆ. ಉದ್ದೇಶಪೂರ್ವಕವಾಗಿ ಶಿವಕುಮಾರ್‌ ಅವರಿಗೆ ಐ.ಟಿ ಕಿರುಕುಳ ಕೊಡುತ್ತಿವೆ.ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ದಂಡ ಹಾಗೂ ಜೈಲು ಶಿಕ್ಷೆಗೆ ಅವಕಾಶವಿದೆ. ಈ ಅವಕಾಶ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ದೂರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.