ADVERTISEMENT

ಬಿಜೆಪಿ–ಜೆಡಿಎಸ್‌ನವರ ಮೇಲ್ಯಾಕೆ ಇ.ಡಿ ದಾಳಿಯಾಗಲ್ಲ? ಡಿ.ಕೆ. ಶಿವಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 14:43 IST
Last Updated 21 ಜುಲೈ 2025, 14:43 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಕನಕಪುರ (ರಾಮನಗರ): ‘ಜಾರಿ ನಿರ್ದೇಶನಾಲಯವು (ಇ.ಡಿ) ಬಿಜೆಪಿ ಮತ್ತು ಜೆಡಿಎಸ್‌ನವರ ಮೇಲೆ ಯಾಕೆ ದಾಳಿ ಮಾಡಿ ಪ್ರಕರಣ ದಾಖಲಿಸುವುದಿಲ್ಲ? ಬಿಜೆಪಿಗೆ ಹೋದವರೆಲ್ಲಾ ಕ್ಲೀನ್ ಆಗಿದ್ದಾರಾ? ಇ.ಡಿ ಪಾರದರ್ಶಕವಾಗಿ ತನಿಖೆ ನಡೆಸಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಬಾರದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪತ್ನಿ ವಿರುದ್ಧ ತನಿಖೆ ನಡೆಸಲು ಇ.ಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಕುರಿತು ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಮುಡಾ ಪ್ರಕರಣದಲ್ಲಿ ಇ.ಡಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗುವ ಅವಶ್ಯಕತೆಯೇ ಇರಲಿಲ್ಲ’ ಎಂದರು.

ADVERTISEMENT

‘ನನ್ನ ವಿರುದ್ಧವೂ ಪ್ರಕರಣ ದಾಖಲಿಸಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಬಳಿಕ, ಆ ಪ್ರಕರಣವೇ ವಜಾವಾಯಿತು. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಕೇವಲ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರ ಮೇಲೆ ಮಾತ್ರ ಇ.ಡಿ ಪ್ರಕರಣ ದಾಖಲಿಸುವುದು ಯಾಕೆ?’ ಎಂದು ಪ್ರಶ್ನಿಸಿದರು.

ಡಿನೋಟಿಫೈ ಸಾಧ್ಯವಿಲ್ಲ: ‘ಬಿಡದಿ ಸಮಗ್ರ ಉಪನಗರ ಯೋಜನೆಗೆ ಭೂಮಿಯನ್ನು ನೋಟಿಫೈ ಮಾಡಿದ್ದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ. ನಾನೀಗ ಅದನ್ನು ಡಿನೋಟಿಫೈ ಮಾಡಲು ಬರುವುದಿಲ್ಲ. ಯೋಜನೆ ಬೇಡ ಎನ್ನುವವರು ಅವತ್ತಿಂದ ಯಾಕೆ ಡಿನೋಟಿಫೈ ಮಾಡಲಿಲ್ಲ? ಈಗ ನನ್ನ ಅವಧಿಯಲ್ಲಿ ಯೋಜನೆ ಜಾರಿಯಾಗುತ್ತಿರುವ ಕಾರಣಕ್ಕೆ ಹೋರಾಟವೇ?’ ಎಂದು ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆ ಕುರಿತ ಪ್ರಶ್ನೆಗೆ ಶಿವಕುಮಾರ್ ಹೇಳಿದರು.

‘ಉಪನಗರಕ್ಕೆ ಗುರುತಿಸಿದ್ದ 9 ಸಾವಿರ ಎಕರೆಯಲ್ಲಿ ಸಾವಿರ ಎಕರೆಯಷ್ಟು ಭೂಮಿಯನ್ನು ಕೆಐಎಡಿಬಿ ಕೊಟ್ಟಾಗ ಯಾಕೆ ಹೋರಾಡಲಿಲ್ಲ. ಉಪನಗರ ಯೋಜನೆಗೆ ಶೇ 75ರಷ್ಟು ರೈತರು ಒಪ್ಪಿಗೆ ನೀಡಿ ಪರಿಹಾರ ಕೊಡಿ ಎಂದಿದ್ದಾರೆ. ರೈತರೊಂದಿಗೆ ಚರ್ಚಿಸಿ ಅವರಿಗೆ ಯಾವ ರೀತಿ ನ್ಯಾಯ ಒದಗಿಸಬೇಕು ಎಂಬುದು ಗೊತ್ತಿದೆ. ರೈತರಿಗೆ ಸಹಾಯ ಮಾಡುವುದಕ್ಕಾಗಿಯೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಜಿಬಿಡಿಎ) ಡಿ.ಕೆ. ಸುರೇಶ್ ಅವರನ್ನು ಸದಸ್ಯರನ್ನಾಗಿ ಮಾಡಿದ್ದೇನೆ’ ಎಂದರು.

ಡಿಸಿಎಂಗೆ ಡೆಂಗಿ: 3 ದಿನ ವಿಶ್ರಾಂತಿ

‘ನನಗೆ ಡೆಂಗಿ ಜ್ವರವಿದೆ. ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಹಾಗಾಗಿ, ಮೂರು ದಿನ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿದ್ದೇನೆ. ನಾಳೆಯಿಂದ ಯಾರ ಕೈಗೂ ಸಿಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಕೋಡಿಹಳ್ಳಿಯಲ್ಲಿ ನಡೆದ ಜನಸ್ಪಂದನಾ ಸಭೆಯ ಭಾಷಣದಲ್ಲಿ ಹೇಳಿದರು. ಈ ಕುರಿತು ಮಾಧ್ಯಮ ಪ್ರಕಟಣೆ ಸಹ ಹೊರಡಿಸಿರುವ ಅವರು, ‘ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಯಾರೂ ತಪ್ಪು ತಿಳಿಯಬಾರದು’ ಎಂದಿದ್ದಾರೆ.

ನಿಮ್ಮ ಹೆಣ ಹೊರುವವನು ನಾನೇ, ನಿಮ್ಮ ಪಲ್ಲಕ್ಕಿ ಹೊರುವವನೂ ನಾನೇ. ನನ್ನ ಹೆಣ ಹೊರುವವರು ನೀವೇ. ನನ್ನ ಹಾಗೂ ನಿಮ್ಮ ಸಂಬಂಧ ಭಕ್ತನಿಗೂ, ಭಗವಂತನಿಗೂ ಇರುವ ಸಂಬಂಧ

– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ (ಕೋಡಿಹಳ್ಳಿ ಜನಸ್ಪಂದನ ಸಭೆಯಲ್ಲಿ ಹೇಳಿದ್ದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.