ADVERTISEMENT

ಮತಾಂತರ ತಡೆ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ: ಡಿಕೆ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 6:30 IST
Last Updated 21 ಡಿಸೆಂಬರ್ 2021, 6:30 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌   

ಬೆಳಗಾವಿ (ಸುವರ್ಣ ವಿಧಾನಸೌಧ): ‘ರಾಜ್ಯದಲ್ಲಿ ಅಶಾಂತಿ ಮೂಡಿಸಲು ಬಿಜೆಪಿಯವರು ಮತಾಂತರ ತಡೆ ಕಾಯ್ದೆ ತರುತ್ತಿದ್ದಾರೆ. ಇದರಿಂದ ಎಲ್ಲರಿಗೂ ಕಸಿವಿಸಿ ಆಗುತ್ತಿದೆ. ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಆಗುತ್ತಿದೆ. ಈ ಕಾನೂನು ಮಾಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಇಲ್ಲಿ ಮಾತನಾಡಿದ ಅವರು, ‘ಈ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ. ಎಲ್ಲಿಯೂ ಬಲವಂತವಾಗಿ ಮತಾಂತರ ಆಗಿಲ್ಲ. ಖಂಡಿತವಾಗಿಯೂ ಈ ಕಾಯ್ದೆಯನ್ನು ವಿರೋಧಿಸುತ್ತೇವೆ. ನಾವೂ ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ. ಸಂವಿಧಾನಕ್ಕೆ ವಿರುದ್ಧವಾಗಿ ಕಾಯ್ದೆ ತರಲಾಗುತ್ತಿದೆ. ರಾಜಕೀಯವಾಗಿ ಕೆಲವು ವಿಷಯಗಳನ್ನು ವಿಷಯಾಂತರ ಮಾಡಲು ತರಲಾಗುತ್ತಿದೆ’ ಎಂದು ದೂರಿದರು.

ಮಲತಾಯಿ ಧೋರಣೆ: ‘ಬೆಳಗಾವಿಯಲ್ಲಿ ಅಧಿವೇಶನ ಮಾಡಿದ ಉದ್ದೇಶ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕೆಂದು. ಆದರೆ, ಕಲ್ಯಾಣ ಕರ್ನಾಟಕ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಮಲತಾಯಿ ಧೋರಣೆ ಅನುಸರಿಸುತ್ತಿದೆ. ಘನಘೋರ ಅನ್ಯಾಯ ಮಾಡುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ‌ ಅಧಿವೇಶನದಲ್ಲಿ ಹತ್ತು ದಿನಗಳ ಒಳಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಮಾತು ಕೊಟ್ಟಿದ್ದರು. ಆದರೆ, ಮೂರು ತಿಂಗಳು ಕಳೆದರೂ ಮಂಡಳಿ ರಚನೆ ಆಗಿಲ್ಲ, ಸಭೆಯೂ ನಡೆದಿಲ್ಲ. ಬಜೆಟ್‌ನಲ್ಲಿ ₹ 1,500 ಕೋಟಿ ಇಡಲಾಗಿದೆ. ₹ 125 ಕೋಟಿ ಅಷ್ಟೇ ಖರ್ಚಾಗಿದೆ. ಖಾಲಿ ಹುದ್ದೆ ಭರ್ತಿ ಆಗಿಲ್ಲ.ಕಲ್ಯಾಣ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಹೋರಾಟ ಮಾಡುತ್ತೇವೆ’ ಎಂದರು.

‘ಅನವಶ್ಯಕವಾಗಿ ಮತಾಂತರ ಕಾಯ್ದೆ ತಂದು ವೈಫಲ್ಯ ಮುಚ್ಚಿ ಹಾಕಲು ಪ್ರಯತ್ನ ನಡಯುತ್ತಿದೆ. ಜನರ ದಾರಿ ತಪ್ಪಿಸುವ ಯತ್ನವನ್ನು ಸರ್ಕಾರ ನಡೆಸುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.