ADVERTISEMENT

ಸಿಬಿಐ ದಾಳಿ: ಸಿಕ್ಕಿದ್ದು ಒಟ್ಟು ₹ 5.27 ಲಕ್ಷ ಮಾತ್ರ ಎಂದ ಡಿ.ಕೆ.ಶಿವಕುಮಾರ್

ಮನೆ, ಕಚೇರಿ ಮೇಲಿನ ಸಿಬಿಐ ದಾಳಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:31 IST
Last Updated 6 ಅಕ್ಟೋಬರ್ 2020, 19:31 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಸಿಬಿಐ ದಾಳಿ ವೇಳೆ ನಮ್ಮ ಮನೆಯಲ್ಲಿ ₹1.77 ಲಕ್ಷ, ನನ್ನ ಕಚೇರಿಯಲ್ಲಿ ₹3.50 ಲಕ್ಷ, ಡಿ.ಕೆ. ಸುರೇಶ್ ಅವರ ದೆಹಲಿ ನಿವಾಸದಲ್ಲಿ ₹1.50 ಲಕ್ಷ, ಸ್ನೇಹಿತ ಸಚಿನ್ ನಾರಾಯಣ್ ಮನೆಯಲ್ಲಿ ₹ 50 ಲಕ್ಷ ಸಿಕ್ಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಊರಿನಲ್ಲಿರುವ ನನ್ನ ತಾಯಿ ಬಳಿ ಕೇಳಿದಾಗ ಸಿಬಿಐನವರು ಏನೂ ತೆಗೆದುಕೊಂಡು ಹೋಗಿಲ್ಲ ಅಂದರು. ಮುಂಬೈಯಲ್ಲಿ ಮಗಳ ಹೆಸರಿನಲ್ಲಿರುವ ಮನೆಗೆ ನಾನು ಹೋಗಿ ಆರು ವರ್ಷ ಆಯಿತು. ಸಿಬಿಐನವರು ಕನಕಪುರದಲ್ಲಿರುವ ಮನೆಗೆ ಹೋಗಿಲ್ಲ. ದೆಹಲಿಯಲ್ಲಿರುವ ನನ್ನ ಎರಡು ಮನೆಗಳಲ್ಲಿ ಏನೂ
ಇರಲಿಲ್ಲ. ಕೆಲವು ಕಾಗದ ಪತ್ರ ತೆಗೆದುಕೊಂಡು ಹೋಗಿದ್ದಾರೆ’ ಎಂದೂ ವಿವರಿಸಿದರು.

‘ಸಚಿನ್ ಇನ್ನೂ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಧವನಂ ಬಿಲ್ಡರ್ಸ್ ಬಳಿಯಿಂದ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ನನ್ನ ಕೋ ಬ್ರದರ್‌ ಶಶಿಕುಮಾರ್‌ ಮನೆಯಿಂದಲೂ ಏನೂ ಸಿಕ್ಕಿಲ್ಲ. ಉಳಿದ ಹಣ ಎಲ್ಲಿಂದ ತರಲು ಸಾಧ್ಯ.ರಾಜಕಾರಣದಲ್ಲಿ ನಾವು ಯಾವುದನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ’ ಎಂದರು.

ADVERTISEMENT

ಜೋಶಿಗೆ ಪ್ರತ್ಯುತ್ತರ: ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೊಡ್ಡವರು. ತಮ್ಮ ಮನೆಯನ್ನು ಮೊದಲು ಶುದ್ಧ ಮಾಡಿಕೊಳ್ಳಲಿ. ಅವರು ನಮ್ಮ ಆಸ್ತಿ ಮೊದಲು ಎಷ್ಟಿತ್ತು, ಈಗ ಎಷ್ಟಿದೆ ಎಂದು ಕೇಳುವ ಮುನ್ನ ತಮ್ಮ ಪಕ್ಷದ ನಾಯಕರ ಆಸ್ತಿ ವಿವರ ಬಹಿರಂಗಪಡಿಸಲಿ’ ಎಂದರು.

‘ಈ ದಾಳಿ ರಾಜಕೀಯ ಪ್ರೇರಿತ ಎಂಬುದು ಎಫ್‌ಐಆರ್ ಪ್ರತಿಯಿಂದ ಗೊತ್ತಾಗುತ್ತದೆ. ಪ್ರಾಥಮಿಕ ತನಿಖೆ ನಡೆದಿದ್ದು ಯಾವಾಗ,
ನಾನು ಪಕ್ಷದ ಅಧ್ಯಕ್ಷ ಆಗಿದ್ದು ಯಾವಾಗ, ಎಫ್‌ಐಆರ್ ದಾಖಲಿಸಿದ್ದು ಯಾವಾಗ ಎಂಬುದನ್ನು ನೋಡಿದರೆ ಸ್ಪಷ್ಟವಾಗುತ್ತದೆ’ ಎಂದೂ ಹೇಳಿದರು.

ಟ್ವೀಟ್‌ ಮಾಡಿರುವ ಡಿ.ಕೆ. ಸುರೇಶ್‌, ‘ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ
₹ 57 ಲಕ್ಷ ಸಿಕ್ಕಿದ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬಾಕಿ ₹50.22 ಲಕ್ಷ ಎಲ್ಲಿ ಸಿಕ್ಕಿದೆ, ಅದರ ಹಿನ್ನೆಲೆ ಏನು ಎನ್ನುವುದನ್ನು ಸಿಬಿಐ ಅಧಿಕಾರಿಗಳೇ ತಿಳಿಸಬೇಕು’ ಎಂದಿದ್ದಾರೆ.

‘ಆಪ್ತ ಸಹಾಯಕರಿಗೆ ಹೊಡೆದರು’

‘ಸಿಬಿಐ ಅಧಿಕಾರಿಗಳು ನನ್ನ ಆಪ್ತ ಸಹಾಯಕರಿಗೆ ಹೊಡೆದಿದ್ದಾರೆ ಎಂದು ನನಗೂ ಮಾಹಿತಿ ಇದೆ. ಈ ಬಗ್ಗೆ ವಿಚಾರಿಸಿದ್ದೇನೆ. ಎಲ್ಲರ ಎದುರಿಗೆ ಬೇಡ ಎಂದು ಸುಮ್ಮನಿದ್ದೇನೆ. ನಾನೇ ಅವರನ್ನು ಸಮಾಧಾನ ಮಾಡಿದ್ದೇನೆ. ಜಿ. ಪರಮೇಶ್ವರ ಅವರ ಆಪ್ತ ಸಹಾಯಕನಿಗೆ ಆದ ಪರಿಸ್ಥಿತಿ ಬರಬಾರದಲ್ಲವೇ’ ಎಂದು ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.