
ಬೆಂಗಳೂರು: ‘ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾತನಾಡಿಕೊಂಡಿದ್ದೇವೆ ಎಂದು ನಿಮಗೆ ಗೊತ್ತಿದೆಯೇ? ರಾಹುಲ್ ಗಾಂಧಿ ಮತ್ತು ಹೈಕಮಾಂಡ್ ಸಮ್ಮುಖದಲ್ಲಿ ಏನು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ನಮಗೆ ಗೊತ್ತಿದೆ. ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ದೆಹಲಿ ಪ್ರವಾಸದಿಂದ ಸೋಮವಾರ ವಾಪಸ್ ಆದ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಸಿದ್ದರಾಮಯ್ಯ ಕೂಡ ನನಗೆ ಬೆಂಬಲವಾಗಿದ್ದಾರೆ. ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನನ್ನ ವಿಚಾರದಲ್ಲಿ ಪಕ್ಷ ಏನು ಹೇಳುತ್ತದೆಯೊ ಅದನ್ನು ಕೇಳುತ್ತೇವೆ ಎಂದು ನಾನು ಮತ್ತು ಮುಖ್ಯಮಂತ್ರಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ’ ಎಂದರು.
‘ನಾಯಕತ್ವದ ವಿಚಾರದಲ್ಲಿ ನಿಮ್ಮ ಶಾಸಕರೇ ಚರ್ಚೆ ಮಾಡುತ್ತಿದ್ದಾರೆ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಶಾಸಕರಿಗೆ ಆಸೆ ಇರುತ್ತದೆ. ಅದರಲ್ಲಿ ತಪ್ಪೇನಿದೆ? ನಾವು ಅವರ ಕಿವಿಯಲ್ಲಿ ಏನೋ ಹೇಳಿರುತ್ತೇವೆ. ಅವರು ಖುಷಿಯಿಂದ ಕಾಯುತ್ತಿರುತ್ತಾರೆ. ನೋಡೋಣ, ಈಗ ಆ ಮಾತು ಯಾಕೆ’ ಎಂದರು.
‘ನಾವು ದೆಹಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ರಾಹುಲ್ ಗಾಂಧಿ ಅವರನ್ನು ನಾನು ಭೇಟಿಯಾಗಿಲ್ಲ ಎಂದು ಮಾಧ್ಯಮಗಳು ಬರೆದಿವೆ. ಒಂದು ದಿನ ಜೊತೆಯಲ್ಲಿ ಕುಳಿತು ಚರ್ಚೆ ಮಾಡಿರುವ ಛಾಯಾಚಿತ್ರದ ಸಹಿತ ನೀವು (ಮಾಧ್ಯಮಗಳು) ವರದಿ ಮಾಡಿದ್ದೀರಿ. ಮರುದಿನ ಭೇಟಿಯೇ ಆಗಿಲ್ಲ ಎನ್ನುತ್ತೀರಿ. ಈ ವಿಚಾರದಲ್ಲಿ ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದರು.
‘ನಾಯಕತ್ವದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಆ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ನಾನು ಮತ್ತು ಮುಖ್ಯಮಂತ್ರಿ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ನಮ್ಮ ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿರ್ದೇಶನದಂತೆ ನಾವು ಸಾಗುತ್ತೇವೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಬೇಡ’ ಎಂದರು.
‘ದೆಹಲಿಯಲ್ಲಿರುವ ನಮ್ಮ ನಿವಾಸದಲ್ಲಿ ರಾಹುಲ್ ಗಾಂಧಿಯವರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಎರಡು ಗಂಟೆ ಚರ್ಚೆ ನಡೆಸಿದ್ದಾರೆ. ಆಗ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡಾ ಇದ್ದರು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು ‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಗೊಂದಲದ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳು ಅಪ್ರಸ್ತುತ’ ಎಂದರು.
‘ಇಬ್ಬರನ್ನೂ ಕರೆದು ಮಾತನಾಡುತ್ತೇವೆ ಎಂದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಲ್ಲಿಯವರೆಗೂ ಏನೇ ಮಾತನಾಡಿದರೂ ಉಪಯೋಗವಿಲ್ಲ’ ಎಂದರು.
ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ‘ಎಲ್ಲ ಸಮುದಾಯಗಳಿಗೂ ನಾಯಕತ್ವ ಬೆಳೆಸಬೇಕೆಂಬ ಆಸೆ ಇರುತ್ತದೆ. ಇದು ಸ್ವಾಭಾವಿಕ. ಎಲ್ಲವನ್ನೂ ಗುರುತಿಸಿಯೇ ಪಕ್ಷವು ಮಲ್ಲಿಕಾರ್ಜುನ ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಹೈಕಮಾಂಡ್ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.
‘ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗಸಭೆಗೆ ತೆರಳಲು ದೆಹಲಿಯಿಂದ ನನಗೆ ಅನುಮತಿ ಸಿಕ್ಕಿದೆ. ಸಿದ್ದರಾಮಯ್ಯನವರಿಗೂ ದಾವೋಸ್‌ಗೆ ತೆರಳುವಂತೆ ತಿಳಿಸಿದ್ದಾರೆ. ನಾನು ಮಂಗಳವಾರ (ಜ.20) ಹೋಗುತ್ತಿದ್ದೇನೆ’ ಎಂದು ಶಿವಕುಮಾರ್ ತಿಳಿಸಿದರು.
‘ದಾವೋಸ್ ಸಭೆಯಲ್ಲಿ ಭಾಗವಹಿಸಬೇಕೆಂದು ನನಗೆ ಕರೆಗಳು ಬರುತ್ತಿವೆ. ವಿರೋಧ ಪಕ್ಷಗಳ ಸ್ನೇಹಿತರೂ ಇದೇ ಸಲಹೆ ನೀಡುತ್ತಿದ್ದಾರೆ. ಹೀಗಾಗಿ ತೆರಳುತ್ತಿದ್ದೇನೆ. ರಾಜ್ಯದ ಹಿತದ ವಿಚಾರದಲ್ಲಿ ಕೆಲವೊಮ್ಮೆ ಅವರ ಸಲಹೆಗಳನ್ನೂ ಸ್ವೀಕರಿಸಬೇಕಲ್ಲವೇ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.