ಡಿ.ಕೆ ಶಿವಕುಮಾರ್
ಬೆಂಗಳೂರು: ‘ಧರ್ಮಸ್ಥಳ ಪ್ರಕರಣವನ್ನು ಬಿಜೆಪಿ ನಾಯಕರು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಂದುತ್ವ ತಮ್ಮ ಮನೆ ಆಸ್ತಿ ಎಂದು ಭಾವಿಸಿದ್ದಾರೆ. ದೂರು ಕೊಟ್ಟಾಗ, ಎಸ್ಐಟಿ ರಚನೆ ಆದಾಗ ಏಕೆ ಮೌನವಾಗಿದ್ದರು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಮುಸುಕುಧಾರಿ ವ್ಯಕ್ತಿ ದೂರು ಸಲ್ಲಿಸಿದಾಗ, ಎಸ್ಐಟಿ ರಚಿಸಿದಾಗ ಬಿಜೆಪಿ ನಾಯಕರು ಮಾತೇ ಆಡಲಿಲ್ಲ. ಈಗ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ರಾಜಕೀಯಕ್ಕಾಗಿ ಧರ್ಮಸ್ಥಳ ಬೇಕಿದೆ ಅಷ್ಟೆ. ದೂರು ನೀಡಿದ ನಂತರವೂ ಸರ್ಕಾರ ತನಿಖೆ ಮಾಡದಿದ್ದರೆ ಏನು ಹೇಳುತ್ತಿದ್ದರು? ಟೀಕೆ ಮಾಡುತ್ತಿರಲಿಲ್ಲವೇ? ರಾಜಕೀಯಕ್ಕಿಂತ ಧರ್ಮಸ್ಥಳದ ಗೌರವ ಕಾಪಾಡುವುದು ನಮ್ಮ ಚಿಂತನೆ’ ಎಂದರು.
‘ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂಬುದು ನನ್ನ ವೈಯಕ್ತಿಕ ಹೇಳಿಕೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಬೇಕು. ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲೇ ಧರ್ಮಸ್ಥಳದ ಪರ ಧ್ವನಿ ಎತ್ತಿದ್ದರು. ಬಿಜೆಪಿ ಶಾಸಕರು ಸದನದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಕಾನೂನು ಪ್ರಕಾರ ತನಿಖೆ ಆಗುತ್ತದೆ’ ಎಂದು ಹೇಳಿದರು.
ಧರ್ಮಸ್ಥಳದ ವಿಚಾರದಲ್ಲಿ ಒಬ್ಬ ವ್ಯಕ್ತಿ ಕುಮ್ಮಕ್ಕು ನೀಡುತ್ತಿದ್ದಾನೆ. ಆತ ಮುಖ್ಯಮಂತ್ರಿ ಅವರನ್ನೇ ಕೊಲೆಗಾರ ಎಂದಿದ್ದಾನೆ. ನಮಗೆ ಮಾಹಿತಿ ಇದೆ.ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಧರ್ಮಸ್ಥಳ ಪ್ರಕರಣದ ತನಿಖೆ ನಡೆಯುತ್ತಿದ್ದು, ಎಸ್‌ಐಟಿ ವರದಿ ನೀಡುವವರೆಗೂ ಏನೂ ಹೇಳುವುದಿಲ್ಲ. ಬಳಿಕ ಮುಖ್ಯಮಂತ್ರಿ ಜತೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದುಜಿ.ಪರಮೇಶ್ವರ, ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.