ADVERTISEMENT

ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 16:29 IST
Last Updated 19 ಏಪ್ರಿಲ್ 2021, 16:29 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್   

ಬೆಂಗಳೂರು:'ಕೊರೊನಾ ವಿಚಾರವಾಗಿ ಸರ್ವಪಕ್ಷ ಸಭೆ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ಆಹ್ವಾನ ಬಂದಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು,'ಕೊರೋನಾ ಪರಿಸ್ಥಿತಿ ನಿರ್ವಹಣೆ ಸಂಬಂಧ ರಾಜ್ಯ ಸರ್ಕಾರ ಇವತ್ತು ಸಭೆ ನಡೆಸಿದ್ದು, ರಾಜ್ಯಪಾಲರು ನಾಳೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಗೆ ರಾಜ್ಯಪಾಲರ ಕಚೇರಿಯಿಂದ ಆಹ್ವಾನ ಬಂದಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಇದೇ ಮೊದಲ ಬಾರಿಗೆ ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಪಾಲರ ಆಳ್ವಿಕೆ ಅಧಿಕೃತವಾಗಿ ಜಾರಿಯಾಗುವ ಲಕ್ಷಣ ಗೋಚರಿಸುತ್ತಿದೆ. ನಾಳೆ ನಾವು ಸಭೆಯಲ್ಲಿ ಭಾಗವಹಿಸುತ್ತೇವೆ' ಎಂದಿದ್ದಾರೆ.

ADVERTISEMENT

ಮುಂದುವರಿದು,'ಕೊರೊನಾ ವಾಸ್ತವಾಂಶದ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದು, ನಾಳೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇವೆ. ಕೊರೋನಾ ಲಸಿಕೆ ಪೂರೈಕೆ ಗುತ್ತಿಗೆಯನ್ನು ಕೇವಲ ಎರಡು ಕಂಪನಿಗಳಿಗೆ ಯಾಕೆ ನೀಡಲಾಗಿದೆ? ಆರೋಗ್ಯ ಕ್ಷೇತ್ರಕ್ಕೆ 30 ಸಾವಿರ ಕೋಟಿ ರುಪಾಯಿ ಮೀಸಲಿಡಬೇಕು. ಎಲ್ಲ ಅಭಿವೃದ್ಧಿ ಕೆಲಸ ನಿಲ್ಲಿಸಿ. ಈ ವಿಚಾರದ ಬಗ್ಗೆ ಗಮನ ಹರಿಸಿ. ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕು. ಆದರೆ ಈವರೆಗೂ ಯಾವುದೇ ಸಿದ್ಧತೆ ಆಗಿಲ್ಲ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆʼ ಎಂದು ಟೀಕಿಸಿದ್ದಾರೆ.

ಜೊತೆಗೆ,'ನಾವು ಕಾಂಗ್ರೆಸ್ ಕಚೇರಿಯಲ್ಲಿ ವೈದ್ಯರ ಘಟಕದ ಜತೆ ಚರ್ಚೆ ಮಾಡಿ ಒಂದು ಹೆಲ್ಪ್ ಲೈನ್ ಆರಂಭಿಸಲು ತೀರ್ಮಾನಿಸಿದ್ದೇವೆ. ಅಲ್ಲಿ ಸೋಂಕಿತರಿಗೆ ಮಾರ್ಗದರ್ಶನ ನೀಡಿ ನೆರವಾಗುತ್ತೇವೆ' ಎಂದರು.

'70 ವರ್ಷ ಕಾಂಗ್ರೆಸ್ ಏನು ಮಾಡಿದೆ ಅಂತಾ ಸುಧಾಕರ್ ಕೇಳಿದ್ದಾರೆ. ಅವರು ಕೇವಲ 1 ವರ್ಷದಿಂದ ಮಾತ್ರ ಬಿಜೆಪಿಯಲ್ಲಿದ್ದಾರೆ. ಉಳಿದ ಅವಧಿಯಲ್ಲಾ ಕಾಂಗ್ರೆಸ್ ನಲ್ಲೇ ಇದ್ದರಲ್ಲ. ಅವರನ್ನು ಬೆಳೆಸಿ, ಶಾಸಕರನ್ನಾಗಿ ಮಾಡಿದ್ದು ಕಾಂಗ್ರೆಸ್' ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.