ಡಿಕೆಶಿ
ಬೆಂಗಳೂರು: ‘ಪ್ರತಿದಿನವನ್ನೂ ಶಾಸಕರಿಗೆ ಮೀಸಲಿಟ್ಟಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ನನ್ನನ್ನು ಭೇಟಿ ಮಾಡಲು ಪ್ರತಿದಿನ ಶಾಸಕರು ಬರುತ್ತಿರುತ್ತಾರೆ’ ಎಂದರು.
‘ಬೆಂಗಳೂರನ್ನು ಐದು ಹೋಳು ಮಾಡಿ ಓಳು ಬಿಡುತ್ತಿದ್ದಾರೆ’ ಎನ್ನುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಈ ವಿಷಯದ ಬಗ್ಗೆ ಈಗಾಗಲೇ ಸದನದಲ್ಲಿ ಮಾತನಾಡಿದ್ದೇವೆ. ಎಲ್ಲರ ಬಳಿಯೂ ಮಾತನಾಡಿಯೇ ತೀರ್ಮಾನ ತೆಗೆದುಕೊಂಡಿದ್ದೇವೆ. ಆದರೂ, ಅವರು ರಾಜಕೀಯ ಮಾಡಲು ಮಾತನಾಡುತ್ತಿದ್ದಾರೆ’ ಎಂದರು.
‘ಬಿಬಿಎಂಪಿ, ವಿದ್ಯುತ್ ಸಂಪರ್ಕ, ‘ಬಿ’ ಖಾತಾ ವಿಚಾರಗಳ ಬಗ್ಗೆ ಒಂದಷ್ಟು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತೇನೆ. ನಾನು ಯಾವುದಕ್ಕೂ ಉತ್ತರ ನೀಡದೆ ಓಡಿ ಹೋಗುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೇವೆ. ಎಲ್ಲದಕ್ಕೂ ಸದ್ಯದಲ್ಲಿ ಉತ್ತರ ನೀಡುತ್ತೇನೆ’ ಎಂದರು.
ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರಲ್ಲ: ‘ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿಮಗೆ ಅಪಮಾನ ಮಾಡಿದರು’ ಎಂದು ಸುದ್ದಿಗಾರರು ಪ್ರಸ್ತಾಪಿಸಿದಾಗ, ‘ಈ ವಿಷಯದ ಬಗ್ಗೆ ಮುಖ್ಯಮಂತ್ರಿಯವರೇ ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ’ ಎಂದರು.
ಎರಡು ದಿನ ಕನಕಪುರದಲ್ಲಿ ಜನಸ್ಪಂದನ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಕ್ಷೇತ್ರದ ಜನರಿಗೆ ನಾನು ಸಮಯ ನೀಡಲು ಆಗುತ್ತಿಲ್ಲ. ಆ ಕಾರಣಕ್ಕೆ ಎರಡು ದಿನ ಅಲ್ಲಿಯೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.