ADVERTISEMENT

ಡಿಕೆಶಿ ಮುಗಿಸಲು ಸಿಎಂ ಸಮಾವೇಶ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 15:31 IST
Last Updated 20 ಜುಲೈ 2025, 15:31 IST
ಆರ್. ಅಶೋಕ 
ಆರ್. ಅಶೋಕ    

ಬೆಂಗಳೂರು: ‘ಕಾಂಗ್ರೆಸ್‌ ನಾಯಕರು ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಮಾವೇಶ ಸರ್ಕಾರಿ ಕಾರ್ಯಕ್ರಮವಲ್ಲ. ಬದಲಿಗೆ ಅದು ಡಿ.ಕೆ.ಶಿವಕುಮಾರ್‌ ಅವರನ್ನು ಮುಗಿಸಲು ಮಾಡಿದ ಕಾರ್ಯಕ್ರಮ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿನ ಒಡಕು ಈ ಕಾರ್ಯಕ್ರಮದಲ್ಲಿ ನಿಚ್ಚಳವಾಗಿ ಕಾಣಿಸಿದೆ. ಡಿ.ಕೆ.ಶಿವಕುಮಾರ್ ಪರವಾಗಿ, ಅಲ್ಲಿದ್ದ ಒಬ್ಬರೂ ಮಾತನಾಡಲಿಲ್ಲ. ಶಿವಕುಮಾರ್‌ಗೆ ಪಾಠ ಕಲಿಸಲು ಮತ್ತು ಅಪಮಾನ ಮಾಡಲೆಂದೇ ಈ ಸಮಾವೇಶ ನಡೆಸಲಾಗಿದೆ’ ಎಂದರು.

‘ಸುರ್ಜೇವಾಲ ರಾಜ್ಯಕ್ಕೆ ಬಂದು ಶಾಸಕರ ಅಹವಾಲುಗಳನ್ನು ಆಲಿಸಿದ್ದಾರೆ. ಇವರ ಜಗಳ ಜನರ ಮುಂದೆ ಬಯಲಾಗಿದೆ. ಈ ಸರ್ಕಾರವನ್ನು ಬೀಳಿಸುವ ಅಗತ್ಯ ಬಿಜೆಪಿಗೆ ಇಲ್ಲ. ಕಾಂಗ್ರೆಸ್‌ನ ಆಂತರಿಕ ಕಲಹದಿಂದಲೇ ಈ ಸರ್ಕಾರ ಬಿದ್ದುಹೋಗಲಿದೆ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರಿನ ಸಮಾವೇಶದಲ್ಲಿ ಕೀಳಾಗಿ ಮಾತಾಡಿದ್ದಾರೆ. ‌‌‌ಪ್ರಧಾನಿ ಬೊಗಳುತ್ತಾರೆಂದು ಹೇಳುವುದು ಕಾಂಗ್ರೆಸ್‌ ನಾಯಕರ ಮನಸ್ಥಿತಿಯನ್ನು ತೋರಿಸುತ್ತದೆ. ಇನ್ನು ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಇವರು ಹಾಗೆ ಮಾತಾಡುತ್ತಿದ್ದಾರೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಬೆಂಗಳೂರನ್ನು ಅಭಿವೃದ್ಧಿ ಮಾಡದೆ, ಹೋಳು ಮಾಡಲಾಗಿದೆ. ಟ್ರಾಫಿಕ್‌ ಜಾಮ್‌, ಪ್ರವಾಹ, ಕಸದ ಸಮಸ್ಯೆ ಯಾವುದು ಕೂಡ ಈ ಕ್ರಮದಿಂದ ನಿವಾರಣೆಯಾಗುವುದಿಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆದರೆ ಪ್ರಗತಿಯಾಗಲ್ಲ. ಬದಲಿಗೆ ಆದಾಯ ಹಂಚಿಕೆಯಲ್ಲಿ ತಾರತಮ್ಯ ಉಂಟಾಗಿ ಇನ್ನಷ್ಟು ಕಲಹ ಉಂಟಾಗಲಿದೆ’ ಎಂದರು.

ಕಾಂಗ್ರೆಸ್‌ನಲ್ಲಿಗ ಡಿ.ಕೆ.ಶಿವಕುಮಾರ್ ಅವರು ಎರಡನೇ ದರ್ಜೆಯ ನಾಯಕರಾಗಿದ್ದಾರೆ. ಅವರ ಜತೆಗೆ ನಿಲ್ಲುವವರು ಒಬ್ಬರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ
ಆರ್‌.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.