
ಡಿಕೆಶಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದ್ದ ತಮ್ಮ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆಗೆ ಹಾಜರಾಗದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯ ಜತೆಗೆ ಸಿದ್ದರಾಮಯ್ಯ ಅವರ ಬಜೆಟ್ ಪೂರ್ವಭಾವಿ ಸಭೆ ಮಂಗಳವಾರ ಸಂಜೆ ನಿಗದಿಯಾಗಿದೆ. ಇಲಾಖಾ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಸಭೆಯಲ್ಲಿ ಇರಬೇಕಿತ್ತು.
ವಿಧಾನಸೌಧದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ‘ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ದೆಹಲಿ ಪ್ರವಾಸದಲ್ಲಿ ರಾಜಕಾರಣ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ’ ಎಂದರು.
‘ಯಾರನ್ನು ಭೇಟಿ ಮಾಡುತ್ತೇನೆ ಎಂದು ಹೇಳಲಾಗದು. ನಿಮಗೆ ಏಕೆ ಇಷ್ಟು ಕುತೂಹಲ. ನಾನು ಉಪಮುಖ್ಯಮಂತ್ರಿ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ ಕೂಡ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್ 10ಕ್ಕೆ, 6 ವರ್ಷವಾಗುತ್ತದೆ. ನಮ್ಮ ಸಂಸದರನ್ನು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಾನು ಭೇಟಿ ಮಾಡುತ್ತಾ ಇರುತ್ತೇನೆ. ಆಗ ನನ್ನ ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲಾ ಹೇಳುತ್ತಾ ಇರುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಾನು ಮುಖ್ಯಮಂತ್ರಿ ಅವರ ಅನುಮತಿ ಪಡೆದುಕೊಳ್ಳುತ್ತಿದ್ದೇನೆ. ನೀರಾವರಿ ಇಲಾಖೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದು, ಮಂಗಳವಾರದ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನನಗಿಂತ ಮುಖ್ಯಮಂತ್ರಿ ಅವರಿಗೇ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಗೊತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.