ADVERTISEMENT

ಕನಕಪುರಕ್ಕೆ ಮೆಡಿಕಲ್‌ ಕಾಲೇಜು: ಮುಖ್ಯಮಂತ್ರಿಗೆ ಡಿ.ಕೆ. ಶಿವಕುಮಾರ್ ಪತ್ರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 12:20 IST
Last Updated 7 ಡಿಸೆಂಬರ್ 2019, 12:20 IST
ಬಿ.ಎಸ್‌. ಯಡಿಯೂರಪ್ಪ ಹಾಗೂ ಡಿ.ಕೆ. ಶಿವಕುಮಾರ್
ಬಿ.ಎಸ್‌. ಯಡಿಯೂರಪ್ಪ ಹಾಗೂ ಡಿ.ಕೆ. ಶಿವಕುಮಾರ್    

ರಾಮನಗರ: ‘ಕನಕಪುರಕ್ಕೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಬೇಕು. ಇಲ್ಲವಾದಲ್ಲಿ ನನ್ನದೇ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿ ಶಾಸಕ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಿದ್ದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ ಕನಕಪುರಕ್ಕೆ ಮಂಜೂರಾಗಿದ್ದನ್ನು ರದ್ದು ಮಾಡಿರುವುದಕ್ಕೆ ಆಕ್ಷೇಪವಿದೆ. ಕೂಡಲೇ ನನ್ನ ಕ್ಷೇತ್ರಕ್ಕೆ ಮೆಡಿಕಲ್‌ ಕಾಲೇಜು ನೀಡಬೇಕು. ಅದರ ನಿರ್ಮಾಣ ಕಾಮಗಾರಿ ಭೂಮಿಪೂಜೆಗೆ ತಾವು ಸಮಯ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ತಾವು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಸಂದರ್ಭ ಆಡಳಿತದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಕಿತ್ತುಕೊಂಡಿರುವುದು ಅದಕ್ಕೆ ವಿರುದ್ಧ ಎಂಬಂತಿದೆ. ನಂಜುಂಡಪ್ಪ ಆಯೋಗದ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಕನಕಪುರಕ್ಕೆ ಮೆಡಿಕಲ್‌ ಕಾಲೇಜಿನ ಅವಶ್ಯಕತೆ ಇದೆ. ಇದನ್ನು ಮನಗಂಡು ಹಿಂದಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌–ಕಾಂಗ್ರೆಸ್ ಸರ್ಕಾರಗಳು ಇಲ್ಲಿ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿದ್ದವು. ಕನಕಪುರ ತಾಲ್ಲೂಕಿನ ರಾಯಸಂದ್ರ ಬಳಿ ಇದಕ್ಕಾಗಿ 25 ಎಕರೆ ಜಾಗವನ್ನೂ ಗುರುತಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆದಿತ್ತು. ಆದರೆ ರಾತ್ರೋರಾತ್ರಿ ತಾವು ಇಲ್ಲಿಗೆ ಮಂಜೂರಾಗಿದ್ದ ಆದೇಶ ರದ್ದುಪಡಿಸಿ ಚಿಕ್ಕಬಳ್ಳಾಪುರಕ್ಕೆ ನೀಡಿದ್ದೀರಿ. ಅಲ್ಲಿಗೆ ಕೊಟ್ಟಿದ್ದಕ್ಕೆ ನನ್ನ ಆಕ್ಷೇಪವಿಲ್ಲ. ಅದಕ್ಕೆ ಸರ್ಕಾರಕ್ಕೆ ಅಧಿಕಾರ ಇದೆ. ಆದರೆ ನಮಗೆ ಮಂಜೂರಾಗಿದ್ದನ್ನು ಕಿತ್ತುಕೊಂಡಿದ್ದು ಸರಿಯಲ್ಲ. ಕನಕಪುರಕ್ಕೆ ಕಾಲೇಜು ನೀಡದೇ ಹೋದರೆ ನನ್ನದೇ ರೀತಿಯಲ್ಲಿ ಹೋರಾಟ ಮಾಡುವುದಕ್ಕೆ ಸಿದ್ಧನಿದ್ದೇನೆ. ಆದರೆ ತಾವು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ನನ್ನದು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.