ADVERTISEMENT

ಹಣೆಬರಹದಲ್ಲಿದ್ದರೆ ನನ್ನ ಅಣ್ಣ ಮುಖ್ಯಮಂತ್ರಿ ಆಗುತ್ತಾರೆ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 15:40 IST
Last Updated 28 ಫೆಬ್ರುವರಿ 2026, 15:40 IST
   

ಬೆಂಗಳೂರು: ‘ಹಣೆಬರಹದಲ್ಲಿದ್ದರೆ ನನ್ನ ಅಣ್ಣ (ಡಿ.ಕೆ. ಶಿವಕುಮಾರ್) ಮುಖ್ಯಮಂತ್ರಿ ಆಗುತ್ತಾರೆ. ಹಣೆಬರಹ ಇಲ್ಲದೇ ಇದ್ದರೆ ಯಾರೂ ಏನೂ ಮಾಡಲು ಆಗುವುದಿಲ್ಲ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.

ಅಧಿಕಾರ ಹಂಚಿಕೆ ಕುರಿತ ವಿಷಯ ಪ್ರಸ್ತಾಪಿಸಿ, ‘ನೀವು ಶಸ್ತ್ರತ್ಯಾಗ ಮಾಡಿದ್ದೀರಾ’ ಎಂದು ಸುದ್ದಿಗಾರರು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲದಿದ್ದಾಗ ತ್ಯಾಗದ ಪ್ರಶ್ನೆಯೇ ಬಾರದು’ ಎಂದರು.

‘ತಾಳ್ಮೆಯ ಅಸ್ತ್ರ ಇದೆ’ ಎಂದಿದ್ದೀರಿ ಎಂದಾಗ, ‘ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ. ರಾಜಕಾರಣದಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ’ ಎಂದರು.

ADVERTISEMENT

ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಕೇಳುವ ಬಗ್ಗೆ ಪ್ರಶ್ನಿಸಿದಾಗ, ‘ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ’ ಎಂದರು.

ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, ‘ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ’ ಎಂದರು.

‘ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತ ಮುಖ್ಯಮಂತ್ರಿ ಮಾಡಬೇಕು’ ಎಂಬ ಸಚಿವ ಎಚ್.ಸಿ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಎಲ್ಲರಿಗೂ ಆಸೆ ಇದೆ. ಇದರಲ್ಲಿ ತಪ್ಪೇನಿಲ್ಲ’ ಎಂದರು.

ಎಲ್ಲರೂ ಅದೇ ರೀತಿ ಹೇಳುತ್ತಾರೆ: ಡಿಕೆಶಿ

‘ಎಲ್ಲರೂ ಅದೇ ರೀತಿ ಹೇಳುತ್ತಾರೆ. ನಾನೇನು ಆ ಸುದ್ದಿಯನ್ನು ಮಾತನಾಡಿಲ್ಲವಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. 

‘ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ’ ಎಂಬ ಸುರೇಶ್ ಮಾತಿಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

‘ಶಾಸಕರು ದೆಹಲಿಗೆ ಹೋಗುವ ವಿದೇಶಕ್ಕೆ ಹೋಗುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ನನ್ನನ್ನು ಯಾರೂ ಕೇಳಿಯೂ ಇಲ್ಲ. ಈ ವಿಚಾರದಲ್ಲಿ ನಾನು ಬಾಯಿ ಹಾಕುವುದೂ ಇಲ್ಲ’ ಎಂದೂ ಅವರು ಹೇಳಿದರು.

‘ನಿಮ್ಮ ಪರವಾಗಿ ಜನರು ಬೆಂಬಲಿಗರು ಶಾಸಕರು ಮಾತನಾಡುತ್ತಿದ್ದಾರೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಮುಖ್ಯಮಂತ್ರಿಯವರೂ ಸೇರಿ 139 ಜನ ಶಾಸಕರೂ ನನ್ನ ಬೆಂಬಲಕ್ಕೆ ಇದ್ದೇ ಇದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.