ಬೆಂಗಳೂರು: ‘ಬೆಂಗಳೂರಿನಲ್ಲಿ ಮೂಲಸೌಕರ್ಯ ಇಲ್ಲ, ರಸ್ತೆಗಳು ಇಲ್ಲ ಎನ್ನುತ್ತಿರುವ ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಏನು ಮಾಡುತ್ತಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಎಲ್ಲಿ ಬಳಕೆ ಮಾಡುತ್ತಿವೆ ಎಂಬ ವಿವರಗಳನ್ನು ಬಹಿರಂಗಪಡಿಸಲಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ರಸ್ತೆ ಸರಿಯಿಲ್ಲ, ಮೂಲಸೌಕರ್ಯ ಇಲ್ಲ ಎಂದು ಎಲ್ಲರೂ ಟೀಕಿಸುತ್ತಾರೆ. ಆದರೆ ಇಲ್ಲಿಯೇ ಕಂಪನಿ ಆರಂಭಿಸಿ, ಇಲ್ಲಿಂದಲೇ ಎಲ್ಲವನ್ನೂ ಪಡೆದುಕೊಂಡು, ಇಲ್ಲಿನ ರಸ್ತೆಗಳ ವಿಸ್ತರಣೆಗೆ ಜಾಗ ಕೇಳಿದರೆ ನೀಡುತ್ತಾರೆಯೇ? ಜಾಗ ನೀಡಲು ಯಾರೊಬ್ಬರೂ ಮುಂದೆ ಬರುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ತ್ವರಿತವಾಗಿ ಆಗುತ್ತಿಲ್ಲ ಎಂದು ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ‘ಎಕ್ಸ್’ನಲ್ಲಿ ಮಾಡಿದ್ದ ಪೋಸ್ಟ್ ಬಗ್ಗೆ ಪ್ರಶ್ನಿಸಿದಾಗ, ‘ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಗರಿಷ್ಠ ಮಟ್ಟದಲ್ಲಿ ಮಾಡುತ್ತಿದ್ದೇವೆ. ಎಲ್ಲರಿಗೂ ಸ್ವಲ್ಪ ತಾಳ್ಮೆ ಇರಬೇಕು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಬೆದರಿಸುವುದೇ ನಿಮಗೆ ಮುಖ್ಯವಾದರೆ, ಅದನ್ನೇ ಮಾಡಿ. ನಾನು ಯಾರನ್ನೂ ಪ್ರಶ್ನಿಸುವುದಿಲ್ಲ, ಟೀಕಿಸುವುದಿಲ್ಲ. ಪ್ರಧಾನಿಯೇ ಬೆಂಗಳೂರನ್ನು ಹೊಗಳಿದ್ದಾರೆ. ಆದರೆ ಇವರು ಪ್ರಧಾನಿ ಮಾತಿಗೆ ತದ್ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇವರಿಗೆ ಏನು ಹೇಳುವುದು’ ಎಂದರು.
‘ಅವರು ‘ಎಕ್ಸ್’ ಮಾಡುವ ಮೂಲಕ, ಅವರಿಗೆ ನೆರವಾಗಿರುವ ದೇಶ ಮತ್ತು ರಾಜ್ಯಕ್ಕೆ ಧಕ್ಕೆ ತರುತ್ತಿದ್ದಾರೆ. 25 ವರ್ಷಗಳ ಹಿಂದೆ ಅವರು ಎಲ್ಲಿದ್ದರು? ಅವರ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ಇರುವುದು ಬೆಂಗಳೂರಿನದ್ದು. ಈ ನಗರವು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ, ಉದ್ಯಮಿಗಳನ್ನು ದೊಡ್ಡಮಟ್ಟಕ್ಕೆ ಬೆಳೆಸಿದೆ. ಈಗ ಈ ನಗರವನ್ನು ಟೀಕಿಸುತ್ತಿರುವವರು, ಇಲ್ಲಿನ ಸರ್ಕಾರಗಳು ತಮಗೆ ಎಷ್ಟು ಜಾಗ ನೀಡಿವೆ ಮತ್ತು ಎಷ್ಟು ನೆರವು ನೀಡಿವೆ ಎಂಬುದನ್ನು ಸ್ಮರಿಸಿಕೊಳ್ಳಬೇಕು’ ಎಂದರು.
‘ಮಹದೇವಪುರ ಹಾಗೂ ಕೆ.ಆರ್.ಪುರವನ್ನೇ ಪ್ರತ್ಯೇಕ ಪಾಲಿಕೆ ಮಾಡಿದ್ದು, ಅಲ್ಲೇ ಐಟಿ ಹಬ್ ಇವೆ. ಅಲ್ಲಿ ಸಂಗ್ರಹವಾಗುವ ಆದಾಯವನ್ನು, ಅಲ್ಲಿಯೇ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಆ ಭಾಗದ ಜನಸಂಖ್ಯೆ, ಅವರ ಸಮಸ್ಯೆಗಳೇನು ಎಂಬ ಅರಿವು ನಮಗೆ ಇದೆ. ಅವರಿಗೆ ನೆರವಾಗಬೇಕು ಎಂದೇ ಈ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Quote - ಆಂಧ್ರಪ್ರದೇಶದಲ್ಲಿ ಗೂಗಲ್ ಎಐ ಕೇಂದ್ರ ಸ್ಥಾಪಿಸಲು ಮುಂದಾದರೆ ಅವರನ್ನು ಬೇಡ ಎಂದು ನಾವು ತಡೆಯಲಾಗುತ್ತದೆಯೇ? ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
‘ಮಾರ್ಕೆಂಟಿಗ್‌ಗಾಗಿ ಬೆಂಗಳೂರಿನ ಹೆಸರು ಬಳಕೆ’
‘ಮೂಲಸೌಕರ್ಯ ಮಾನವ ಸಂಪನ್ಮೂಲ ನವೋದ್ಯಮ ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಸಹ ಇದನ್ನೇ ಮಾಡುತ್ತಿದ್ದಾರೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ‘ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು 2 ಲಕ್ಷ ವಿದೇಶಿಯರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರ. ಕೇಂದ್ರ ಸರ್ಕಾರಕ್ಕೆ ಸುಮಾರು ಶೇ 40ರಷ್ಟು ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.