ADVERTISEMENT

ಕೊಳೆ ಈಗ ನಮ್ಮೊಂದಿಗಿಲ್ಲ: ರಮೇಶ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ

ಅವರ‍್ಯಾವ ದೊಡ್ಡ ಸಾಹುಕಾರ? ಚುನಾವಣೆ ವೇಳೆ ನೆಂಟಸ್ತಿಕೆ ಬೇಡ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 8:23 IST
Last Updated 29 ನವೆಂಬರ್ 2021, 8:23 IST
   

ಬೆಳಗಾವಿ: ‘ಕೊಳೆ ಈಗ ನಮ್ಮೊಂದಿಗಿಲ್ಲ. ದೂರ ಹೋಗಿದೆ. ಅಂಥವರನ್ನೆಲ್ಲಾ ಇಟ್ಟುಕೊಂಡಿದ್ದರೆ ಬಹಳ ಕಷ್ಟ ಆಗುತಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ನಾಯಕ ಭರಮಗೌಡ (ರಾಜು) ಕಾಗೆ ಮನೆಗೆ ರಮೇಶ ಜಾರಕಿಹೊಳಿ ಭೇಟಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಬೇರೆ ಪಕ್ಷದವರನ್ನು ನಮ್ಮ ಪಕ್ಷದ ನಾಯಕರು ಮನೆಗೆ ಸೇರಿಸಬಾರದು’ ಎಂದು ತಾಕೀತು ಮಾಡಿದರು.

ADVERTISEMENT

‘ಬೆಳಗಾವಿ ಚುನಾವಣೆಯನ್ನು ಇಡೀ ರಾಜ್ಯ ನೋಡುತ್ತಿದೆ. ಹೋದ ಚುನಾವಣೆಯಲ್ಲಿ ನಾವು ಶಿಸ್ತುಕ್ರಮ ವಹಿಸಲಿಲ್ಲ. ಹೀಗಾಗಿ ಈಗ ತೊಂದರೆ ಅನುಭವಿಸುತ್ತಿದ್ದೇವೆ’ ಎಂದರು.

‘ಸಾಮೂಹಿಕ ನಾಯಕತ್ವದಲ್ಲಿ ಒಮ್ಮತದ ಅಭ್ಯರ್ಥಿಯನ್ನಾಗಿ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಿದ್ದೇವೆ. ಬಿಜೆಪಿಯೂ ಒಬ್ಬ ಅಭ್ಯರ್ಥಿಯನ್ನಷ್ಡೆ ಹಾಕಿದೆ. ಒಂದೇ ಮತ ಹಾಕುವಂತೆ ಆ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಕೂಡ ಹೇಳಿದ್ದಾರಲ್ಲವೇ? ಬಿಜೆಪಿಯಲ್ಲಿರುವ ಶಿಸ್ತಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಬಂಡಾಯಗಾರರನ್ನು ಇಟ್ಟುಕೊಳ್ಳಬೇಕೋ ಬೇಡವೋ ಎನ್ನುವ ಚರ್ಚೆಯೂ ಆಗುತ್ತಿದೆ. ನಮ್ಮಲ್ಲಿ ಕೊಳೆ ಇಲ್ಲದಿರುವುದು ಒಳ್ಳೆಯದೇ ಅಗಿದೆ’ ಎಂದು ರಮೇಶ ಜಾರಕಿಹೊಳಿ ಅವರನ್ನು ಪರೋಕ್ಷವಾಗಿ ಕೊಳೆಗೆ ಹೋಲಿಸಿದರು.

‘ನಮ್ಮ ನಾಯಕರು ಬಿಜೆಪಿಯವರ ಜೊತೆ ನೆಂಟಸ್ತಿಕೆ ಇಟ್ಟುಕೊಂಡಿದ್ದೀರೇಕೆ? ಇದಕ್ಕೆ ಕಡಿವಾಣ ಹಾಕಬೇಕು. ಮನೆಗೆ ಸೇರಿಸುತ್ತಿದ್ದೀರೇಕೆ, ವಾಹನ ಕಳುಹಿಸಿದರೆಂದು ಹೋಗುತ್ತೀರೇಕೆ? ಅವರ‍್ಯಾವ ಡೊಡ್ಡ ಸಾಹುಕಾರ? ನೆಂಟಸ್ತನ ಅಥವಾ ವಿಶ್ವಾಸವನ್ನು ಚುನಾವಣೆ ವೇಳೆ ಇಟ್ಟುಕೊಳ್ಳಬೇಡಿ. ವಾಹನ ಕಳುಹಿಸಿದರೆಂದು ಹೋಗಬೇಡಿ. ನಮ್ಮ ಮತಗಳನ್ನು ಕಾಪಾಡಿಕೊಳ್ಳಿ.‌ 2ನೇ ಮತದ ಬಗ್ಗೆ ಚಿಂತಿಸಬೇಡಿ’ ಎಂದು ತಿಳಿಸಿದರು.

‘ಇಲ್ಲಿನ ದುಷ್ಟ ರಾಜಕಾರಣಕ್ಕೆ ಬಿಜೆಪಿಯವರು ಕೊನೆ ಹಾಡದಿದ್ದರೆ ಅವರಿಗೂ ಉಳಿಗಾಲ ಇರುವುದಿಲ್ಲ’ ಎಂದರು.

‘ಮತದಾರರಿಗೆ ಬಿಜೆಪಿಯವರು ₹ 10ಸಾವಿರ ಮುಂಗಡ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ’ ಎಂದು ದೂರಿದರು.

‘ಗೋಕಾಕ, ಅರಭಾವಿ, ರಾಯಬಾಗದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಅಕ್ರಮ ನಡೆಯುತ್ತಿದೆ. ಮತದಾರರ ಚೀಟಿ ಪಡೆದುಕೊಂಡು ಬೇರೆಯವರು ಮತ ಹಾಕುವುದು ನಡೆದುಕೊಂಡು ಬಂದಿದೆ. ಹೀಗಾಗಿ, ಮತದಾನ ಸಂದರ್ಭದಲ್ಲಿ ವಿಡಿಯೊ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು’ ಎಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ತಿಳಿಸಿದರು.

‘ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಅವರ ಮಕ್ಕಳು ಏಜೆಂಟ್ ಆಗಲು ಮುಂದಾಗಿರುವುದು ಮಾದರಿ ನಡೆಯಾಗಿದೆ. ಅವರು ಸವಾಲು ಸ್ವೀಕರಿಸಿರುವುದಕ್ಕೆ ರಾಜ್ಯದಾದ್ಯಂತ ಸ್ವಾಗತ ವ್ಯಕ್ತವಾಗಿದೆ’ ಎಂದರು.

‘ರಮೇಶ ಅಥವಾ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ವಾಹನ ಕಳುಹಿಸಿದರೆಂದು ಹೋದವರ ಮೇಲೆ ನನಗೆ ನಂಬಿಕೆ ಇಲ್ಲ. ಸಾಹುಕಾರ ಕರೆದರೆಂದು ವಿಶ್ವಾಸದಿಂದ ಹೋಗಿದ್ದೆವು ಎಂದು ಹೇಳಿದರೆ ನಂಬುವುದಿಲ್ಲ. ಚುನಾವಣೆ ಮುಗಿಯುವವರೆಗೂ ಪ್ರತಿಸ್ಪರ್ಧಿಗಳ ಗಾಡಿಗಳನ್ನು ಏರಬೇಡಿ. ಬಂಡುಕೋರರಿಗೆ ಬುದ್ಧಿ‌ ಕಲಿಸುವ ಅವಕಾಶ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.