ADVERTISEMENT

ಒಡಕಿನ ಮಾತು ಆಡಬೇಡಿ | ದೇವೇಗೌಡರಿಂದ ಸಿದ್ದರಾಮಯ್ಯಗೆ ಬುದ್ಧಿವಾದ

ಚುನಾವಣೆ ಶಂಕೆ ವ್ಯಕ್ತಪಡಿಸಿದ ಎಚ್‌ಡಿಡಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 20:00 IST
Last Updated 21 ಜೂನ್ 2019, 20:00 IST
   

ಬೆಂಗಳೂರು:‘ಸಿದ್ದರಾಮಯ್ಯ ಅವರು ಒಡಕಿನ ಮಾತು ಆಡುವುದನ್ನು ಬಿಟ್ಟರೆ ಮಾತ್ರ ಮೈತ್ರಿ ಸರ್ಕಾರ ನಾಲ್ಕು ವರ್ಷ ಅಧಿಕಾರದಲ್ಲಿರಬಹುದು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಪಕ್ಷದಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಅವರು ಈ ಮಾತು ಆಡುವುದಕ್ಕೆ ಮುನ್ನ, ‘ಕಾಂಗ್ರೆಸ್‌ಗೆ ಸರ್ಕಾರ ನಡೆಸುವ ಮನಸ್ಸಿದೆಯಾ, ಇಲ್ಲವಾ ಎಂಬುದು ನನಗೆ ಗೊತ್ತಿಲ್ಲ. ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತೋ ಎಂಬುದೂ ಗೊತ್ತಿಲ್ಲ, ಮಧ್ಯಂತರ ಚುನಾವಣೆ ನಿಶ್ಚಿತ’ ಎಂಬ ಹೇಳಿಕೆಯನ್ನೂ ನೀಡಿದ್ದರು. ಅದು ರಾಜ್ಯದಲ್ಲಿ ಇಡೀ ದಿನಭಾರಿ ರಾಜಕೀಯ ಸಂಚಲನ ಮೂಡಿಸಿತು.

‘ಮೈತ್ರಿ ಸರ್ಕಾರ ಮಾಡಲೇಬೇಕು ಅಂತ ನನಗೇನೂ ಇರಲಿಲ್ಲ. ದೆಹಲಿ ನಾಯಕರು ಬಂದು ನಿಮ್ಮ ಮಗನನ್ನ ಮುಖ್ಯಮಂತ್ರಿ ಮಾಡಬೇಕು ಅಂದರು. ಸಾರ್ವತ್ರಿಕ ಚುನಾವಣೆ ನಂತರ ಕಾಂಗ್ರೆಸ್‌ಹೈಕಮಾಂಡ್ ಸ್ವಲ್ಪ ಶಕ್ತಿ ಕಳೆದುಕೊಂಡಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ, ಅದೆಲ್ಲ ಕಾಂಗ್ರೆಸ್ ಮುಖಂಡರ ಕೈಯಲ್ಲಿ ಇದೆ’ ಎಂದು ಗೌಡರುಹೇಳಿದ್ದರು.

ADVERTISEMENT

ದೇವೇಗೌಡರರಿಂದ ಇಂತಹ ಹೇಳಿಕೆ ಹೊರಬಿದ್ದಂತೆಯೇ ರಾಜ್ಯದ ರಾಜಕೀಯದಲ್ಲಿ ಭಾರಿ ಸಂಚಲನ ಉಂಟಾಯಿತು. ಹುಬ್ಬಳ್ಳಿಯಲ್ಲಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ದೇವೇಗೌಡರ ಮಾತನ್ನು ಬಲವಾಗಿ ಅಲ್ಲಗಳೆದರು. ‘ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ, ಮೈಸೂರು ಕ್ಷೇತ್ರವನ್ನು ನಾವು ಕೇಳಿದ್ದು ನಿಜ, ಆದರೆ ತುಮಕೂರು ಕ್ಷೇತ್ರವನ್ನುನಾವು ಒತ್ತಾಯಪೂರ್ವಕವಾಗಿ ಅವರಿಗೆ ಕೊಟ್ಟಿಲ್ಲ’ ಎಂದರು.

‘ರಾಹುಲ್‌ ಗಾಂಧಿಗೆ ಜತೆಗೆ ನಾನು ಎಂತಹ ಮಾತು ಆಡಿದ್ದೇನೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಿದ್ದರೂ ಊಹೆ ಮಾಡಿ ಒಂದಕ್ಕೊಂದು ಸೇರಿಸಿಕೊಂಡು ಹೇಳುವ ಪರಿಪಾಠ ಬೆಳೆದಿದೆ. ಇಂತಹ ಊಹೆಯ ಪತ್ರಿಕೋದ್ಯಮದಿಂದ ನಮಗೆ ಕಷ್ಟವಾಗಿದೆ’ ಎಂದರು.

ದೇವೇಗೌಡರ ಮಾತಿನ ಬಿಸಿ ಸಿದ್ದರಾಮಯ್ಯ ಅವರ ಮನೆಗೆ ಹಲವು ಪ್ರಮುಖ ನಾಯಕರ ದಿಢೀರ್ ಭೇಟಿ ರೂಪದಲ್ಲೂವ್ಯಕ್ತವಾಯಿತು. ಮತ್ತೊಂದೆಡೆ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದಿಂದ ಕಂಗೆಟ್ಟಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಎರಡು ದಿನ ಕೊರಟಗೆರೆ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಲು ನಿರ್ಧರಿಸಿದರು.

ಸಣ್ಣಪುಟ್ಟ ವ್ಯತ್ಯಾಸ ಸಾಮಾನ್ಯ: ಸಿಎಂ

ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಸಾಮಾನ್ಯ. ಅನುಸರಿಸಿಕೊಂಡು ಹೋಗುವುದು ಮೈತ್ರಿ ಧರ್ಮ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು. ‘ದೇವೇಗೌಡರು ಅನುಭವಸ್ಥರು, ಹಿರಿಯರು. ಮಾಜಿ ಪ್ರಧಾನಿ. ಪ್ರತಿ ಹೇಳಿಕೆಯನ್ನೂ ಯೋಚನೆ ಮಾಡಿಯೇ ಆಡಿರುತ್ತಾರೆ. ಈ ಬಗ್ಗೆ ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕರು ಸೇರಿ ಚರ್ಚೆ ಮಾಡಲಿದ್ದೇವೆ’ ಎಂದರು.

ಕೈಲಾಗದಿದ್ದರೆ ನಾವು ಸರ್ಕಾರ ಮಾಡುತ್ತೇವೆ: ಯಡಿಯೂರಪ್ಪ

‘ಸರ್ಕಾರ ನಡೆಸಲು ಸಾಧ್ಯವಾಗದೆ ಇದ್ದರೆ ಅಧಿಕಾರ ಬಿಟ್ಟುಕೊಡಿ, ನಾವು ಸರ್ಕಾರ ನಡೆಸುತ್ತೇವೆ. ಹಿರಿಯ ರಾಜಕಾರಣಿ ದೇವೇಗೌಡರು ಸತ್ಯವನ್ನೇ ಹೇಳಿದ್ದಾರೆ. ಸರ್ಕಾರ ಬೀಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಒಂದು ವರ್ಷದಿಂದ ಹೇಳುತ್ತಿದ್ದರು. ಈಗ ಸತ್ಯ ರಾಜ್ಯದ ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ನಾಯಕರ ಕಚ್ಚಾಟ, ಮೈತ್ರಿ ಪಕ್ಷದಲ್ಲಿ ಗೊಂದಲದಿಂದ ಸರ್ಕಾರ ಬೀಳಲಿದೆ ಎಂಬುದು ಗೌಡರ ಮಾತಿನಿಂದ ಸ್ಪಷ್ಟವಾಗುತ್ತದೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

* ಚುನಾವಣೆಗೆ ಹೆದರಿ ಯಾರೂ ಕೂರಲ್ಲ, ಹಾಗಂತ ಈಗ ಯಾರೂ ಚುನಾವಣೆಗೆ ಹೋಗಲ್ಲ. ಸರ್ಕಾರ ಭದ್ರವಾಗಿದೆ

-ದಿನೇಶ್ ಗುಂಡೂರಾವ್‌,ಕೆಪಿಸಿಸಿ ಅಧ್ಯಕ್ಷ

*ಸರ್ಕಾರ ಸುಭದ್ರವಾಗಿದೆ. ದೇವೇಗೌಡರು ಮಧ್ಯಂತರ ಚುನಾವಣೆ ಬರಲಿದೆ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಗೊತ್ತಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ
-ಎಚ್‌.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

* ಸರ್ಕಾರ ಸುಭದ್ರವಾಗಿದೆ. ದೇವೇಗೌಡರು ಮಧ್ಯಂತರ ಚುನಾವಣೆ ಬರಲಿದೆ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಗೊತ್ತಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ

-ಎಚ್‌.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.