ADVERTISEMENT

ಒಂದೂ ಮತ ವ್ಯರ್ಥ ಆಗದಂತೆ ಎಚ್ಚರ ವಹಿಸಿ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ

ಮೂರನೇ ಅಭ್ಯರ್ಥಿ ಲಹರ್‌ ಸಿಂಗ್‌ ಸಿರೋಯಾ ಅವರನ್ನು ಗೆಲ್ಲಿಸುವುದು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 18:25 IST
Last Updated 8 ಜೂನ್ 2022, 18:25 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿ ಲಹರ್‌ ಸಿಂಗ್‌ ಸಿರೋಯಾ ಅವರನ್ನು ಗೆಲ್ಲಿಸುವುದು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಂದೂ ಮತವ್ಯರ್ಥ ಆಗದಂತೆ ಎಚ್ಚರಿಕೆ ವಹಿಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

ಅಲ್ಲದೆ, ಕಡ್ಡಾಯವಾಗಿ ಹಾಜರಾಗಿ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಲು ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ.

ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಮತ್ತು ಲಹರ್‌ ಸಿಂಗ್‌ ಅವರಿಗೆ ಮತ ಹಾಕಿಸಲು ಸಚಿವರಾದ ಆರ್.ಅಶೋಕ, ವಿ.ಸುನಿಲ್‌ ಕುಮಾರ್ ಮತ್ತು ಬಿ.ಸಿ.ನಾಗೇಶ್‌ ಅವರನ್ನು ಒಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ. ಆ ತಂಡದ ಮೂಲಕವೇ ಶಾಸಕರು ಮತ ಚಲಾಯಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ADVERTISEMENT

ನಿರ್ಮಲಾ ಅವರಿಗೆ 46, ಜಗ್ಗೇಶ್‌ಗೆ 45 ಶಾಸಕರು ಮತ ನೀಡಲು, ಲಹರ್‌ ಸಿಂಗ್‌ಗೆ ಮೊದಲ ಪ್ರಾಶಸ್ತ್ಯ 32 ಮತಗಳನ್ನು ನೀಡಲಾಗುವುದು. ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬುದನ್ನು ಗುರುವಾರ ನಿರ್ಧರಿಸಲಾಗುವುದು ಎಂದೂ ಹೇಳಿದರು.

ಯಾವುದೇ ಒಂದೂ ಮತ ವ್ಯರ್ಥ ಆಗದಂತೆ ಎಚ್ಚರ ವಹಿಸಲು ಗುರುವಾರ ರಾತ್ರಿ 7 ಕ್ಕೆ ಅಣುಕು ಮತದಾನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದರಲ್ಲಿ ಎಲ್ಲ ಶಾಸಕರೂ ಭಾಗವಹಿಸಲಿದ್ದಾರೆ. ರಾತ್ರಿ 8 ಕ್ಕೆ ನಿರ್ಮಲಾ ಸೀತಾರಾಮನ್‌ ಅವರು ಶಾಸಕರಿಗೆ ಭೋಜನ ಕೂಟವನ್ನೂ ಏರ್ಪಡಿಸಿದ್ದು, ಶಾಸಕರ ಜತೆ ಅವರು ಮಾತುಕತೆ ನಡೆಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಉಪಹಾರದ ಬಳಿಕ ಮತ ಚಲಾವಣೆಗೆ ಒಟ್ಟಿಗೇ ಹೋಗುತ್ತೇವೆ ಎಂದೂ ಅವರ ಹೇಳಿದರು.

ಮೂರನೇ ಅಭ್ಯರ್ಥಿಗೆ ಎಷ್ಟು ಸಂಖ್ಯೆಯಲ್ಲಿ ಎರಡನೇ ಪ್ರಾಶಸ್ತ್ಯದ ಮತ ನೀಡಿದರೆ ಸೂಕ್ತ, ಮತ ಮೌಲ್ಯದಿಂದ ಅಭ್ಯರ್ಥಿಗೆ ಅನುಕೂಲವಾಗುತ್ತದೆ ಎಂಬುದರ ಲೆಕ್ಕಾಚಾರ ಇನ್ನೂ ನಡೆಯುತ್ತಿದೆ. ಸಣ್ಣ ಗೊಂದಲ ಇರುವುದರಿಂದ ಅಂತಿಮ ನಿರ್ಧಾರಕ್ಕೆ ಆಗಿಲ್ಲ. ಗುರುವಾರ ಆ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದರು.

ನಾಲ್ಕನೆ ಸ್ಥಾನಕ್ಕೆ ಏನು ಬೇಕಾದರೂ ಆಗಬಹುದು: ಬೊಮ್ಮಾಯಿ
ಈ ಹಿಂದೆ ರಾಜ್ಯಸಭಾ ಚುನಾವಣೆಗಳಲ್ಲಿ ಕೊನೆ ಹಂತದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಹೀಗಾಗಿ ನಾಲ್ಕನೇ ಸ್ಥಾನಕ್ಕೆ ಏನು ಬೇಕಾದರೂ ಆಗಬಹುದು. ಚುನಾವಣೆಯ ಮಧ್ಯದಲ್ಲೇ ಏರುಪೇರು ಆದ ಉದಾಹರಣೆಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ಲಹರ್ ಸಿಂಗ್ ಅವರಿಗೆ ಮೊದಲ ಪ್ರಾಶಸ್ತ್ಯದ 32 ಮತಗಳು ಚಲಾವಣೆ ಆಗಿ, ಎರಡನೇ ಪ್ರಾಶಸ್ತ್ಯದ ಮತಗಳು ಯಥಾವತ್ತಾಗಿ ಚಲಾವಣೆಯಾದರೆ ಅವರ ಗೆಲುವು ನಿಶ್ಚಿತ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.