ADVERTISEMENT

ಮೋದಿ ಹೆಸರಲ್ಲಿ ಮತ ಯಾಚನೆ: ದೇವೇಗೌಡ ಗರಂ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 15:52 IST
Last Updated 7 ಏಪ್ರಿಲ್ 2019, 15:52 IST
   

ಬೆಂಗಳೂರು: ಬಿಜೆಪಿಯು ತನ್ನ ಅಭ್ಯರ್ಥಿಗಳ ಹೆಸರಿನಲ್ಲಿ ಮತ ಕೇಳದೇ, ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಯಾಚನೆ ಮಾಡುತ್ತಿರುವ ಬಗ್ಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿಗಳು ತಮ್ಮ ಸಾಧನೆ ಹೆಸರಿನಲ್ಲಿ ಮತ ಕೇಳದೇ, ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಅದೇ ರೀತಿ ಮೋದಿಯವರು ಅಭ್ಯರ್ಥಿಗಳ ಹೆಸರಿನಲ್ಲಿ ಮತ ಕೇಳದೇ ತಮ್ಮ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮತದಾರರು ಈ ವಿದ್ಯಮಾನಗಳ ಬಗ್ಗೆ ಗಮನ ಹರಿಸಬೇಕು. ದೇಶದಲ್ಲಿ ಚುನಾವಣೆಯು ಅಭಿವೃದ್ಧಿ ಹೆಸರಿನಲ್ಲಿ ನಡೆಯಬೇಕೇ ಹೊರತು ವ್ಯಕ್ತಿ ಕೇಂದ್ರಿತವಾಗಿ ನಡೆಯಬಾರದು. ಮೋದಿಯವರು ಇದೇ 18 ರವರೆಗೆ ಮೈಸೂರು, ಬೆಂಗಳೂರು, ಮಂಗಳೂರು, ಕೋಲಾರ, ಬೆಳಗಾವಿ , ಹೈದರಾಬಾದ್- ಕರ್ನಾಟಕ ಪ್ರದೇಶದಲ್ಲಿ ಭಾಷಣ ಮಾಡುತ್ತಾರೆ. ಇದನ್ನು ದೂಷಿಸುವುದಿಲ್ಲ, ಜನತೆ ಇದನ್ನು ಗಮನಿಸಬೇಕು ಎಂದರು.

ADVERTISEMENT

‘ಈ ಬಾರಿ ನಾನೂ ಚುನಾವಣೆ ಕಣದಲ್ಲಿ ಇರುವುದರಿಂದ ನಮ್ಮ ಸರ್ಕಾರದ ಸಾಧನೆಯನ್ನು ಜನರ ಮುಂಡಿಡುತ್ತೇವೆ. ಮೋದಿ ವರ್ತನೆಯನ್ನೂ ಜನರಿಗೆ ಹೇಳುತ್ತೇವೆ. ಜನರೇ ತೀರ್ಮಾನಿಸಲಿ, ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ’ ಎಂದರು.

‘ಮೋದಿ ನೇತೃತ್ವದ ಸರ್ಕಾರ ₹500 ಕೋಟಿಗಳಷ್ಟು ಮೊತ್ತವನ್ನು ಮಾಧ್ಯಮಗಳ ಜಾಹಿರಾತಿಗೆ ಖರ್ಚು ಮಾಡಿದೆ. ಹೀಗಾಗಿ ಮಾಧ್ಯಮಗಳು ಮೋದಿ ಸಾಧನೆ, ವ್ಯಕ್ತಿತ್ವನ್ನು ಕೊಂಡಾಡುತ್ತಿವೆ’ ಎಂದರು.

ಇದೇ 8 ರಂದು ಆಂಧ್ರದಲ್ಲಿ ಪ್ರಚಾರ ನಡೆಸುತ್ತೇವೆ. ಇದೇ 9 ರಿಂದ 13 ರವರೆಗೆ ಸಿದ್ದರಾಮಯ್ಯ ಅವರ ಜತೆ ಸೇರಿ ಜಂಟಿ ಪ್ರಚಾರ ನಡೆಸುತ್ತೇನೆ ಎಂದರು.

ಐಟಿ ಇಲಾಖೆ ಮಂಡ್ಯ, ಹಾಸನದಲ್ಲಿ ದಾಳಿ ಮಾಡಿದೆ. ಅಲ್ಲದೆ, ಪಶ್ಚಿಮಬಂಗಾಳ, ಒಡಿಶಾದಲ್ಲೂ ದಾಳಿ ಮಾಡಿದೆ. ಯಾರನ್ನೆಲ್ಲ ಗುರಿ ಮಾಡಿ ದಾಳಿ ನಡೆಸಲಾಗಿದೆ ಎಂಬ ವಿಚಾರವೂ ಗೊತ್ತು. ಈ ಬಗ್ಗೆ ಮುಂದೆ ಮಾತನಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.