ADVERTISEMENT

ಚನ್ನಕೇಶವಸ್ವಾಮಿ ದೇಗುಲದ ಬಳಿ ವ್ಯಾಪಾರ ನಡೆಸದಂತೆ ಮುಸ್ಲಿಂ ವ್ಯಾಪಾರಿಗೆ ನೋಟಿಸ್‌

ಚನ್ನಕೇಶವಸ್ವಾಮಿ ದೇವಸ್ಥಾನ ಆವರಣದಲ್ಲಿ ಮಳಿಗೆ ಇಟ್ಟಿರುವ ರಾಹಿಲ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 15:52 IST
Last Updated 31 ಮಾರ್ಚ್ 2022, 15:52 IST
ಚನ್ನಕೇಶವ ದೇಗುಲ
ಚನ್ನಕೇಶವ ದೇಗುಲ    

ಬೇಲೂರು: ಇಲ್ಲಿನ ಚನ್ನಕೇಶವಸ್ವಾಮಿ ದೇವಸ್ಥಾನ ಮುಂಭಾಗದ ವಾಣಿಜ್ಯ ಮಳಿಗೆಯಲ್ಲಿ ಆಟಿಕೆ ಅಂಗಡಿ ಇಟ್ಟಿರುವ ಮುಸ್ಲಿಂ ವ್ಯಾಪಾರಿ ರಾಹಿಲ್ ಎಂಬುವವರಿಗೆ ವ್ಯಾಪಾರ ನಡೆಸದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ ಮಾರ್ಚ್‌ 28ರಂದು ನೋಟಿಸ್ ನೀಡಿದ್ದಾರೆ.

ದೇಗುಲದ ಆವರಣದಲ್ಲಿ ಕೊಳಲು, ಪಿಟೀಲು ವ್ಯಾಪಾರ ಮಾಡುತ್ತಿದ್ದ ಬೀದಿಬದಿಯ ಹಿಂದೂಗಳಲ್ಲದವರಿಗೂ ‘ವ್ಯಾಪಾರ ನಡೆಸಬೇಡಿ’ ಎಂದು ಕಾರ್ಯನಿರ್ವಹಣಾಧಿಕಾರಿ ಮೌಖಿಕವಾಗಿ ಸೂಚಿಸಿದ್ದಾರೆ. ‘ವ್ಯಾಪಾರಕ್ಕೆ ಅನುವು ಮಾಡಬೇಕು’ ಎಂದು ಈ ವ್ಯಾಪಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದರು.

‘40 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದೇನೆ. ಆಟಿಕೆ ವ್ಯಾಪಾರವೇ ಜೀವನಕ್ಕೆ ಆಧಾರ. ಹೀಗಾಗಿ, ವ್ಯಾಪಾರ ನಡೆಸಲು ಅವಕಾಶ ನೀಡಬೇಕು’ ಎಂದು ರಾಹಿಲ್‌ ಉತ್ತರಿಸಿದ್ದಾರೆ.

ADVERTISEMENT

‘ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದ ಮೇರೆಗೆ ನೋಟಿಸ್ ನೀಡಿದ್ದು, ವಿವಾದ ತಣ್ಣಗಾಗುವವರೆಗೂ ವ್ಯಾಪಾರ ಮಾಡಬಾರದು ಎಂದು ಸೂಚಿಸಲಾಗಿದೆ’ ಎಂದು ವಿದ್ಯುಲ್ಲತಾ ತಿಳಿಸಿದರು.

‘ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಅನ್ಯಧರ್ಮೀಯರಿಗೆ ಅವಕಾಶ ನೀಡಬಾರದು’ ಎಂದು ತಾಲ್ಲೂಕಿನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.

ಕೋಮುಭಾವನೆ ಕೆರಳಿಸುತ್ತಿಲ್ಲ: ಸಂತೋಷ್ ಕೆಂಚಾಂಬ

ಬೇಲೂರು: ‘ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ವೈಯಕ್ತಿಕವಾಗಿ ಹೇಳುತ್ತಿಲ್ಲ. ಈಗಾಗಲೇ ಇರುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದಷ್ಟೇ ಆಗ್ರಹಿಸುತ್ತಿರುವೆ. ಕೋಮು ಭಾವನೆ ಕೆರಳಿಸುತ್ತಿಲ್ಲ’ ಎಂದುರಾಷ್ಟ್ರಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್ ಕೆಂಚಾಂಬ ಪ್ರತಿಪಾದಿಸಿದರು.

ಇಲ್ಲಿನ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ಗುರುವಾರ ಹಿಂದೂಪರ ಘೋಷಣೆಗಳನ್ನು ಕೂಗಿದ ಅವರು, ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ 2002 ಅನ್ನು ಸರಿಯಾಗಿ ಜಾರಿಗೊಳಿಸಬೇಕೆಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿರುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.