ADVERTISEMENT

ಆಣೆ ಪ್ರಮಾಣಕ್ಕೆ ದೇವಸ್ಥಾನ ಬಳಸಿ ಪಾವಿತ್ರ್ಯ ಹಾಳು ಮಾಡಬೇಡಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 11:20 IST
Last Updated 10 ನವೆಂಬರ್ 2019, 11:20 IST
ಹುಣಸೂರು ತಾಲ್ಲೂಕಿನ ಧರ್ಮಾಪುರ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು (ಎಡಚಿತ್ರ). ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಹುಣಸೂರು ತಾಲ್ಲೂಕಿನ ಧರ್ಮಾಪುರ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು (ಎಡಚಿತ್ರ). ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು   

ಹುಣಸೂರು: ರಾಜಕಾರಣಿಗಳು ದೇವಸ್ಥಾನಗಳನ್ನು ಆಣೆ– ಪ್ರಮಾಣಗಳಿಗೆ ಬಳಸಿಕೊಳ್ಳುವ ತೆವಲು ಹೆಚ್ಚಾಗಿದೆ. ದೇವಸ್ಥಾನದ ಪಾವಿತ್ರ್ಯ ಹಾಳು ಮಾಡಬಾರದು ಎಂದುವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಧರ್ಮಾಪುರ ಗ್ರಾಮದಲ್ಲಿ ಮುಜರಾಯಿ ಇಲಾಖೆ ವತಿಯಿಂದ ₹1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಚನ್ನಕೇಶವ ಸ್ವಾಮಿ ದೇವಸ್ಥಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಮೂಲಕ ದೇವರನ್ನು ಕಾಣಬೇಕು. ಜನಸೇವೆಯಿಂದ ಮಾಡುವ ಮೂಲಕ ದೇವರನ್ನು ಆರಾಧಿಸಬೇಕು. ಅಂತಹ ವ್ಯಕ್ತಿಗಳೇ ನಿಜವಾದ ಭಕ್ತರು. ಭಾರತದಲ್ಲಿ ಲಕ್ಷಾಂತರ ದೇವಸ್ಥಾನ, ಮಸೀದಿಗಳಿವೆ. ಈ ದೇವಸ್ಥಾನಗಳಿಗೆ ಸಾವಿರಾರು ಭಕ್ತರು ಹೋಗುವುದು ಸಂಪ್ರದಾಯ. ಮನುಷ್ಯ ತಾನು ಬದುಕುವ ಜತೆಗೆ ಪರರೂ ಬದುಕಲು ಬಿಡಬೇಕು. ಸ್ವಾರ್ಥವನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿ ಪಾರಾಯಣ ಮಾಡಿ, ಇತರರಿಗೆ ಕೇಡು ಬಯಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಾನವೀಯತೆಗೆ ಯಾವುದೇ ಮಂತ್ರವಿಲ್ಲ. ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂದರು.

ಮಾಜಿ ಶಾಸಕ ಮಂಜುನಾಥ್ ಮಾತನಾಡಿ, ‘ಸಿದ್ದರಾಮಯ್ಯ ಅವರು ನಾಸ್ತಿಕರು ಎಂದು ಕೆಲವರು ಹೇಳುತ್ತಾರೆ. ಇವರು ನಾಸ್ತಿಕರಾಗಿದ್ದರೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡುತ್ತಿದ್ದರೆ? ಸಿದ್ದರಾಮಯ್ಯ ದೇವರನ್ನು ನಂಬುತ್ತಾರೆ. ಆದರೆ, ಆಡಂಬರದ ಪೂಜೆಗೆ ಒತ್ತು ನೀಡುವುದಿಲ್ಲ’ ಎಂದು ಹೇಳಿದರು.

ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ತುಮಕೂರು ಜಿಲ್ಲೆಯ ವಿಶ್ವಕರ್ಮ ಸಮಾಜದ ಆದಿಲಕ್ಷ್ಮಿ ಮಠದ ನೀಲಕಂಠಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿ.ಪಂ. ಸದಸ್ಯ ಕಟ್ಟನಾಯಕ, ತಾ.ಪಂ. ಸದಸ್ಯೆ ಸರಸಮ್ಮ, ಐಶ್ವರ್ಯಾ ಮಹದೇವ್‌, ಮರಿಗೌಡ, ಸುರೇಶ್‌, ಪ್ರಭಾಕರ್‌, ಗ್ರಾ.ಪಂ. ಸದಸ್ಯ ರಾಜು, ರವಿಶಂಕರ್‌, ತಹಶೀಲ್ದಾರ್ ಬಸವರಾಜ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗಿರೀಶ್‌ ಮತ್ತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇದ್ದರು.

‘ಮಂಜುನಾಥ್‌ಗೆ ಕೂಲಿ ಕೊಡಿ’

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದ್ದು, ಈ ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಸ್ಪರ್ಧಿಸಲಿದ್ದಾರೆ. ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದಾರೆ. ಅವರು ಶಾಸಕರಾಗಿದ್ದ ವೇಳೆ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಜನರ ಸೇವೆ ಮಾಡಿದ್ದಾರೆ. ಅವರ ಕೆಲಸಕ್ಕೆ ‘ಕೂಲಿ ನೀಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

‘ನಾನು ಶಾಸಕನಾಗಿದ್ದಾಗ ಧರ್ಮಾಪುರ, ಗೊಮ್ಮಟಗಿರಿ ಮತ್ತು ಮರದೂರು ಗ್ರಾಮಗಳ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ₹9 ಕೋಟಿ ಅನುದಾನವನ್ನು ಕೊಡಿಸಿದ್ದೆ. ತರಿಕಲ್‌ನ ಸಾವಿರ ಕಂಬಗಳ ದೇವಸ್ಥಾನ ಅಭಿವೃದ್ಧಿ ಪ್ರಗತಿಯಲ್ಲಿದೆ’ ಎಂದುಎಚ್‌.ಪಿ.ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.