ADVERTISEMENT

ಸಚಿವರ ಆಪ್ತ ಶಾಖೆ ಸಿಬ್ಬಂದಿ ವಾಪಸ್‌ಗೆ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:54 IST
Last Updated 1 ಆಗಸ್ಟ್ 2021, 1:54 IST

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಸ್ಟ್‌ 2ರ ಮಧ್ಯಾಹ್ನದೊಳಗೆ ಕರ್ತವ್ಯದಿಂದ ಬಿಡುಗಡೆಗೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸುತ್ತೋಲೆ ಹೊರಡಿಸಿದೆ.

ನಿಯೋಜನೆ ಮತ್ತು ಸ್ಥಳ ನಿಯುಕ್ತಿ ಆಧಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಸೋಮವಾರ ಮಧ್ಯಾಹ್ನದೊಳಗೆ ಮಾತೃ ಇಲಾಖೆ, ನಿಗಮ ಅಥವಾ ಮಂಡಳಿಗಳಿಗೆ ಮರಳಬೇಕು. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದವರು ಕರ್ತವ್ಯದಿಂದ ಬಿಡುಗಡೆ ಹೊಂದಬೇಕು ಎಂದು ಶುಕ್ರವಾರ ಹೊರಡಿಸಿರುವ ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಆಯಾ ಕಚೇರಿಗಳಲ್ಲಿ ಬಾಕಿ ಇದ್ದ ಭೌತಿಕ ಕಡತಗಳು ಮತ್ತು ಇ–ಕಚೇರಿ ಕಡತಗಳನ್ನು ಶನಿವಾರ ಸಂಜೆಯೊಳಗೆ ಆಯಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಹಿಂದಿರುಗಿಸಿ ಸ್ವೀಕೃತಿ ಪಡೆಯಬೇಕು. ಗುರುತಿನ ಚೀಟಿ, ವಾಹನ ಪಾಸ್‌, ಕಂಪ್ಯೂಟರ್‌, ಲೇಖನ ಸಾಮಗ್ರಿ, ಪೀಠೋಪಕರಣ, ದೂರವಾಣಿ ಸೇರಿದಂತೆ ಕಚೇರಿ ಉಪಯೋಗಕ್ಕೆ ಒದಗಿಸಿದ್ದ ಎಲ್ಲ ಸಾಮಗ್ರಿಗಳನ್ನೂ ಹಿಂದಿರುಗಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ADVERTISEMENT

ಸಾಮಾನ್ಯವಾಗಿ ಮುಖ್ಯಮಂತ್ರಿ ಅಥವಾ ಸಂಪುಟ ಸದಸ್ಯರ ಬದಲಾವಣೆ ಆದಾಗ ಆಪ್ತ ಶಾಖೆಯ ಅಧಿಕಾರಿಗಳು, ಸಿಬ್ಬಂದಿಯ ಬಿಡುಗಡೆಗೆ ಸುತ್ತೋಲೆ, ಆದೇಶ ಹೊರಡಿಸುತ್ತಿರಲಿಲ್ಲ. ಈ ಬಾರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇಂತಹ ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.