ADVERTISEMENT

ಸಿದ್ಧಗಂಗಾ ಶಿವಕುಮಾರ ಶ್ರೀಗೆ ಚಿಂತಾಮಣಿ ವೈದ್ಯರ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 11:36 IST
Last Updated 15 ಡಿಸೆಂಬರ್ 2018, 11:36 IST
ಶಿವಕುಮಾರ ಸ್ವಾಮೀಜಿ, ಡಾ.ಪ್ರದೀಪ್ ಕೃಷ್ಣ
ಶಿವಕುಮಾರ ಸ್ವಾಮೀಜಿ, ಡಾ.ಪ್ರದೀಪ್ ಕೃಷ್ಣ   

ಚಿಂತಾಮಣಿ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಚೆನ್ನೈನ ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ಡಾ.ಮಹಮ್ಮದ್ ರೇಲಾ ಅವರ ತಂಡದಲ್ಲಿ ಚಿಂತಾಮಣಿಯ ಯುವವೈದ್ಯ ಡಾ.ಪ್ರದೀಪ್ ಕೃಷ್ಣ ಇದ್ದಾರೆ. ಇದು ನಾಡಿಗೆ ಹೆಮ್ಮೆಯ ವಿಷಯ ಎನ್ನುವಂತಾಗಿದೆ.

‘ಶಿವಕುಮಾರ ಸ್ವಾಮೀಜಿ ಅವರಿಗೆ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಪುಣ್ಯ’ಎನ್ನುವರು ಪ್ರದೀಪ್ ಕೃಷ್ಣ.

ಪ್ರದೀಪ್ ಕೃಷ್ಣ ದೇಶದ ಅತ್ಯುನ್ನತ ಸರ್ಕಾರಿ ವೈದ್ಯಕೀಯ ವಿದ್ಯಾಸಂಸ್ಥೆ ಚಂಡೀಗಡದ ಪೋಸ್ಟ್ ಗ್ರಾಜ್ಯುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರೀಸರ್ಚ್ ಸೆಂಟರ್‌ನಲ್ಲಿ (ಪಿಜಿಐಎಂಇಆರ್) 3 ವರ್ಷ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯೇ ಎಂ.ಎಸ್ ಪದವಿ ಗಳಿಸಿದ್ದಾರೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿದ್ಯಾ ಸಂಸ್ಥೆಯಲ್ಲಿ (ಎಐಐಎಂಎಸ್) ಎಂಸಿಎಚ್ (ಜಿ.ಐ) ಪದವಿ ಪಡೆದಿದ್ದಾರೆ.

ADVERTISEMENT

ಅವರಿಗೆ ಕರಳು ಕಸಿ ಚಿಕಿತ್ಸೆಯಲ್ಲಿ ಹೆಚ್ಚಿನ ತರಬೇತಿ ಪಡೆಯಬೇಕು ಎಂಬ ಆಸಕ್ತಿ ಇತ್ತು. ಆಗ ಡಾ.ಮಹಮ್ಮದ್ ರೇಲಾ ಅವರ ತಂಡ ಸೇರಿದರು. ಒಂದು ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ.

ಗ್ರಾಮೀಣ ವಿದ್ಯಾರ್ಥಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನಕ್ಕೆ ಅವಕಾಶ ಪಡೆದು ಸಾಧನೆ ಮೆರೆದಿರುವುದು ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಆದರ್ಶವೇ ಸರಿ.

‘ಎಂಬಿಬಿಎಸ್ ಮುಗಿದ ತಕ್ಷಣ ಕೆಪಿಎಸ್‌ಸಿಯಿಂದ ಉದ್ಯೋಗದ ಆದೇಶ ಬಂದಿತ್ತು. ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂಬ ಛಲದಿಂದ ಕೆಲಸಕ್ಕೆ ಸೇರಲಿಲ್ಲ. ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಂಡಿದ್ದ. ಆಗ ಎಂ.ಎಸ್.ರಾಮಯ್ಯ ಮತ್ತು ದಾವಣಗೆರೆಯ ಬಾಪೂಜಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂ.ಎಸ್‌ಗೆ ಸೀಟು ದೊರೆಯಿತು. ಆದರೆ ಚಂಡೀಗಡದ ಪಿಜಿಐನಲ್ಲೇ ವ್ಯಾಸಂಗ ಮಾಡಬೇಕು ಎಂಬ ಹಟದಿಂದ ಎರಡನೇ ಬಾರಿ ಪರೀಕ್ಷೆ ಬರೆದು ಸೀಟು ಪಡೆದ’ಎಂದುಪ್ರದೀಪ್ ಕೃಷ್ಣ ಅವರ ತಾಯಿ ಜೆ.ಎಲ್.ವರಲಕ್ಷ್ಮಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.